
ತಮಿಳುನಾಡಿನ ಕೊಯಮತ್ತೂರಿನಲ್ಲಿ ಫೆಬ್ರವರಿ 26 ಮತ್ತು 27ರಂದು ಈಶ ಯೋಗ ಕೇಂದ್ರ ವ್ಯಾಪಕ ಪ್ರಚಾರದೊಂದಿಗೆ ಆಚರಿಸಲು ಉದ್ದೇಶಿಸಿರುವ ಶಿವರಾತ್ರಿ ಹಬ್ಬಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣಿಯಂ ಮತ್ತು ಕೆ ರಾಜಶೇಖರ್ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಈಶ ಸಂಸ್ಥೆ ನಿಯಮ ಪಾಲಿಸುತ್ತಿದ್ದು ಯೋಗ ಕೇಂದ್ರದ ಆವರಣದೊಳಗೆ ಕಾರ್ಯಕ್ರಮ ನಡೆಸುತ್ತಿದೆ. ಹೀಗಾಗಿ ಆವರಣದ ಹೊರಗಿರುವವರಿಗೆ ಶಬ್ದಮಾಲಿನ್ಯ ಉಂಟಾಗದು ಎಂದು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಲಯಕ್ಕೆ ಹೇಳಿದೆ.
ಈಶ ಪ್ರತಿಷ್ಠಾನದ ಪಕ್ಕದಲ್ಲಿರುವ ಜಮೀನಿನ ಮಾಲೀಕರಾದ ಕೊಯಮತ್ತೂರಿನ ನಿವಾಸಿ ಎಸ್ ಟಿ ಶಿವಜ್ಞಾನನ್ ನಿಯಮಗಳನ್ನು ಪಾಲಿಸದೆ ಶಿವರಾತ್ರಿ ಉತ್ಸವ ನಡೆಸುತ್ತಿರುವುದಾಗಿ ದೂರಿದ್ದರು.
ಈಶ ಯೋಗ ಕೇಂದ್ರದಿಂದ ಹೊರಬರುವ ಕೊಳಚೆ ನೀರು ಮತ್ತು ಅದು ಉಂಟು ಮಾಡುವ ಶಬ್ದ ಮಾಲಿನ್ಯ ಪ್ರಶ್ನಿಸಿ ಈ ಹಿಂದೆ ತಾನು ನ್ಯಾಯಾಲಯದ ಮೆಟ್ಟಿಲೇರಿದ್ದಾಗಿ ಅವರು ತಿಳಿಸಿದರು. ಆದರೆ ನ್ಯಾಯಾಲಯದ ಸೂಚನೆಯನ್ನು ಈಶ ಯೋಗ ಕೇಂದ್ರ ಪಾಲಿಸಿರಲಿಲ್ಲ ಎಂದಿದ್ದರು.
ಆದರೆ ಪ್ರತಿ ಅಫಿಡವಿಟ್ ಸಲ್ಲಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಈಶ ಯೋಗ ಕೇಂದ್ರ ಒಳಚರಂಡಿ ಸಂಸ್ಕರಣಾ ವ್ಯವಸ್ಥೆ ಹೊಂದಿದ್ದು ಅದು ದೈನಂದಿನ ತ್ಯಾಜ್ಯ ನೀರನ್ನು ನಿರ್ವಹಿಸಬಲ್ಲದು. ಹಬ್ಬಕ್ಕೆಂದು ನಿರ್ಮಿಸಲಾಗಿರುವ ತಾತ್ಕಾಲಿಕ ಶೌಚಾಲಯದಲ್ಲಿ ಸಂಗ್ರಹಿಸಲಾಗುವ ತ್ಯಾಜ್ಯವನ್ನು ಕೊಯಮತ್ತೂರು ಮಹಾನಗರ ಪಾಲಿಕೆಯ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತದೆ. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ, ಕಳೆದ ವರ್ಷದ ಶಬ್ದ ಮಟ್ಟ ನಿಗದಿತ 75 ಡಿಬಿ (ಎ) ಮಿತಿಯೊಳಗೆ ಇತ್ತು ಎಂದು ಹೇಳಿತ್ತು.
ಕೇವಲ ಆತಂಕ ವ್ಯಕ್ತಪಡಿಸಿರುವ ಅರ್ಜಿದಾರರು ಉತ್ಸವ ನಡೆಸದಂತೆ ಈಶ ಯೋಗ ಕೇಂದ್ರಕ್ಕೆ ತಡೆಯಾಜ್ಞೆ ಕೋರಲು ಕಾನೂನುಬದ್ಧ ವಾದ ಮಂಡಿಸಿಲ್ಲ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.