Wikipedia, ANI 
ಸುದ್ದಿಗಳು

ಎಎನ್ಐ ಕುರಿತ ಮಾನಹಾನಿಕರ ಪುಟ ತೆಗೆದುಹಾಕುವಂತೆ ವಿಕಿಪೀಡಿಯಗೆ ದೆಹಲಿ ಹೈಕೋರ್ಟ್ ಆದೇಶ

'ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌ ವರ್ಸಸ್ ವಿಕಿಮೀಡಿಯಾ ಫೌಂಡೇಶನ್' ಶೀರ್ಷಿಕೆಯ ಪುಟ ಸೃಷ್ಟಿಸಿದ್ದಕ್ಕೆ ನ್ಯಾಯಾಲಯ ಮತ್ತೆ ಆಕ್ಷೇಪಣೆ ವ್ಯಕ್ತಪಡಿಸಿದೆ.

Bar & Bench

ಏಷ್ಯನ್‌ ನ್ಯೂಸ್‌ ಇಂಟರ್‌ನ್ಯಾಷನಲ್‌ (ಎಎನ್‌ಐ) ಸುದ್ದಿ ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರಕಟಿಸಲಾಗಿದ್ದ ಮಾನಹಾನಿಕರ ಪುಟತೆಗೆದುಹಾಕುವಂತೆ ವಿಕಿಪೀಡಿಯಗೆ ದೆಹಲಿ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಅಲ್ಲದೆ 'ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್ ವರ್ಸಸ್ ವಿಕಿಮೀಡಿಯಾ ಫೌಂಡೇಶನ್' ಎಂಬ ಶೀರ್ಷಿಕೆಯ ಪುಟವನ್ನು ಪ್ರಕಟಿಸಲು ವಿಕಿಪೀಡಿಯ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಈ  ಬಾರಿಯ ವಿಚಾರಣೆ ವೇಳೆಯೂ ಆಕ್ಷೇಪಿಸಿತು. ಕಳೆದ ವಿಚಾರಣೆ ವೇಳೆಯೂ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ವಿಕಿಪುಟವನ್ನು ಮೊದಲು ತೆಗೆದುಹಾಕಿದ ನಂತರ ತಾನು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.

ವಿಕಿಪೀಡಿಯದ ಅಧಿಕೃತ ಪ್ರತಿನಿಧಿ  ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಂತೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಕಿಪೀಡಿಯ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ವಿಭಾಗೀಯ ಪೀಠ ಕೂಡ ವಿಕಿಪಿಡಿಯಾ ನಡೆಗೆ ಅಸಮ್ಮತಿ ಸೂಚಿಸಿದೆ.

ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಮಾಹಿತಿ ಸಂಕಲಿಸಲು ಅವಕಾಶವಿದ್ದು ಎಎನ್‌ಐಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಬರೆಯಲಾಗಿತ್ತು.

ಎಎನ್ಐಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಉಲ್ಲೇಖಿಸುವ ಮೂಲಕ ವಿಕಿಪೀಡಿಯ ಮಾನಹಾನಿಕರ ಹೇಳಿಕೆ ಸೇರಿಸಲು ಅನುಮತಿಸಿದೆ ಎಂದು ಆರೋಪಿಸಿ ಎಎನ್ಐ ಮಾನನಷ್ಟ ಮೊಕದ್ದಮೆ ಹೂಡಿತ್ತು.

ಬಳಿಕ ಹೈಕೋರ್ಟ್‌ ಆದೇಶದ ಹೊರತಾಗಿಯೂ ವಿಕಿಪೀಡಿಯ ಪುಟದಲ್ಲಿ ಮಾನಹಾನಿಕರ ವಿಚಾರ ಸೇರಿಸಿದ ಮೂವರು ವ್ಯಕ್ತಿಗಳ ಹೆಸರು ಬಹಿರಂಗಪಡಿಸದ ವಿಕಿಪೀಡಿಯ ನಡೆಯನ್ನು ಪ್ರಶ್ನಿಸಿ ಅದು ಹೈಕೋರ್ಟ್‌ ಏಕಸದಸ್ಯ ಪೀಠದ ಮೊರೆ ಹೋಗಿತ್ತು. ಆಗ ಏಕಸದಸ್ಯ ಪೀಠ ವಿಕಿಪೀಡಿಯದ ಅಧಿಕೃತ ಪ್ರತಿನಿಧಿಯೊಬ್ಬರು ನ್ಯಾಯಾಲಯಕ್ಕೆ ಖುದ್ದು ಹಾಜರಿರಬೇಕು ಎಂದು ಆದೇಶಿಸಿತ್ತು. ಇದನ್ನು ವಿಕಿಪೀಡಿಯ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದೆ. 

ಮಾನಹಾನಿಕರ ವಿಚಾರ ಸೇರಿಸಿದವರ ವಿವರ ಬಹಿರಂಗಪಡಿಸದ ವಿಕಿಪೀಡಿಯ ತನಗಿರುವ ಮಧ್ಯಸ್ಥ ವೇದಿಕೆ ಎಂಬ ಸುರಕ್ಷೆಯ ನೆಲಯನ್ನು ಕಳೆದುಕೊಂಡಿದೆ. ಹೀಗಾಗಿ ಅದು ಮೊಕದ್ದಮೆಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಪ್ರಕರಣದ ಬಗ್ಗೆಯೇ ಪುಟ ರಚಿಸಿದ್ದಕ್ಕೆ ಅದು ಮತ್ತೆ ಆಕ್ಷೇಪಿಸಿತು.  

ಪೀಠದ ಬಗ್ಗೆ, ನ್ಯಾಯಾಲಯದ ಕಲಾಪದ ಬಗ್ಗೆ ಯಾರಾದರೂ ದುರುದ್ದೇಶಪೂರಿತವಾಗಿ ಏನಾದರೂ ಬರೆದರೆ ಆಗ ವಿಕಿಪೀಡಿಯ ಏನು ಮಾಡುತ್ತದೆ ಎಂದು ಪ್ರಶ್ನಿಸಿತು.

ಈ ಹಂತದಲ್ಲಿ ವಿಕಿಪೀಡಿಯ ಪರ ವಕೀಲ ಅಖಿಲ್‌ ಸಿಬಲ್‌ ಅವರು, ಮಧ್ಯಸ್ಥ ವೇದಿಕೆಯು ತನ್ನದೇ ಆದ ನೀತಿ ಹೊಂದಿದ್ದು, ಸ್ವಯಂ ನಿಯಂತ್ರಿತವಾಗಿದೆ. ಅಂತಹ ಅಂಶಗಳನ್ನು (ನ್ಯಾಯಾಲಯದ ವಿರುದ್ಧದ ಅಂಶ) ತೆಗೆದು ಹಾಕಲಾಗುವುದು. ಒಂದು ಮಧ್ಯಸ್ಥ ವೇದಿಕೆಯಾಗಿ ನ್ಯಾಯಾಲಯದ ಆದೇಶದಂತೆ ಕಾರ್ಯ ನಿರ್ವಹಿಸುವುದಾಗಿಯೂ ತಿಳಿಸಿದರು.

ವಿಕಿಪೀಡಿಯ ಹೀಗೆ ನಡೆದುಕೊಳ್ಳುತ್ತದೆಯೇ ಎಂದು ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿದಾಗ ಅಖಿಲ್‌ ಅವರು ಕೆಲ ವಿಚಾರಗಳಲ್ಲಿ ವಿಕಿಪೀಡಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ನಂತರ ನ್ಯಾಯಾಲಯ  36 ಗಂಟೆಗಳ ಒಳಗೆ ಪುಟ ತೆಗೆದುಹಾಕುವಂತೆ ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 21ರಂದು ನಡೆಯಲಿದೆ.