ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ [ಅಕ್ಕಿನೇನಿ ನಾಗಾರ್ಜುನ ಮತ್ತು ಬಿಎಫ್‌ಎಕ್ಸ್‌ಎಕ್ಸ್‌ಎಕ್ಸ್ ಡಾಟ್ ಆರ್ಗ್ ಜಾಲತಾಣ ಇನ್ನಿತರರ ನಡುವಣ ಪ್ರಕರಣ] .
ನಾಗಾರ್ಜುನ ಅವರ ಹೆಸರು, ಚಿತ್ರ, ಹೋಲಿಕೆ ಮತ್ತು ವ್ಯಕ್ತಿತ್ವ ವೈಶಿಷ್ಟ್ಯಪೂರ್ಣತೆಯುಳ್ಳದ್ದಾಗಿದ್ದು ಅವರ ವ್ಯಕ್ತಿತ್ವದ ಯಾವುದೇ ಅಂಶವನ್ನು ಮೂರನೇ ವ್ಯಕ್ತಿ ಬಳಸಿಕೊಳ್ಳುವುದು ಕಂಡುಬಂದರೆ ಅದು ಪ್ರಾಯೋಜಕತ್ವದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿ ವಂಚನೆಗೆ ಕಾರಣವಾಗುತ್ತದೆ ಎಂದು ಸೆಪ್ಟೆಂಬರ್ 25 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ತೇಜಸ್ ಕರಿಯಾ ಹೇಳಿದರು.
"ಒಬ್ಬರ ವ್ಯಕ್ತಿತ್ವ ಹಕ್ಕುಗಳ ಶೋಷಣೆ ಎಂಬುದು ಅವರ ಆರ್ಥಿಕ ಹಿತಾಸಕ್ತಿಗಳನ್ನು ಮಾತ್ರವಲ್ಲದೆ ಘನತೆಯಿಂದ ಬದುಕುವ ಹಕ್ಕನ್ನು ಸಹ ಅಪಾಯಕ್ಕೆ ಸಿಲುಕಿಸುತ್ತದೆ, ಹೆಸರು, ಚಿತ್ರ, ಹೋಲಿಕೆಯಂತಹ ಗುಣಲಕ್ಷಣಗಳನ್ನು ಅನಧಿಕೃತವಾಗಿ ಬಳಸುವುದರಿಂದ ಅರ್ಜಿದಾರರ ಸಮ್ಮತಿ ಬಗ್ಗೆ ಸಾರ್ವಜನಿಕರಲ್ಲಿ ಅನಿವಾರ್ಯ ಗೊಂದಲ ಉಂಟಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ಪ್ರತಿವಾದಿಗಳು (ಅನಾಮಧೇಯ ವ್ಯಕ್ತಿಗಳಿಗೂ ಅನ್ವಯವಾಗುವಂತೆ) ನಾಗಾರ್ಜುನ ಅವರ ಹೆಸರು, ಚಿತ್ರ, ಹೋಲಿಕೆ ಅಥವಾ ಅವರೊಂದಿಗೆ ಪ್ರತ್ಯೇಕವಾಗಿ ಗುರುತಿಸಬಹುದಾದ ಅವರ ವ್ಯಕ್ತಿತ್ವದ ಯಾವುದೇ ಗುಣಲಕ್ಷಣಗಳನ್ನು ಬಳಸದಂತೆ ಅದು ನಿರ್ಬಂಧಿಸಿದೆ.
ಇದಲ್ಲದೆ, ನಾಗಾರ್ಜುನ ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುವ ಯುಆರ್‌ಎಲ್‌ಗಳನ್ನು ನಿರ್ಬಂಧಿಸಲು ಕೂಡ ನ್ಯಾಯಾಲಯ ಆದೇಶಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾದ ವಸ್ತುವಿಷಯದಲ್ಲಿ ತನ್ನ ಚಿತ್ರವನ್ನು ಅನಧಿಕೃತವಾಗಿ ಬಳಸುವುದರ ಮೂಲಕ ತನ್ನ ವ್ಯಕ್ತಿತ್ವ ಹಕ್ಕು ಉಲ್ಲಂಘಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ತೆಲುಗು ನಟ ನಾಗಾರ್ಜುನ ಅರ್ಜಿ ಸಲ್ಲಿಸಿದ್ದರು.
ನಾಗಾರ್ಜುನ ಪರ ವಕೀಲರು, ನಟನಿಗೆ ಗಣನೀಯ ವರ್ಚಸ್ಸು ಇದ್ದು, ನಟನ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳುವ ಅನಧಿಕೃತ ವಸ್ತುವಿಷಯದಿಂದಾಗಿ ಅದು ಅಪಾಯದಲ್ಲಿದೆ ಎಂದರು. ಯೂಟ್ಯೂಬ್ ಹಾಗೂ ಅಂತಹ ಇನ್ನಿತರ ವೇದಿಕೆಗಳಲ್ಲಿ ಅವರ ತಿರುಚಿದ ಚಿತ್ರಗಳನ್ನು ಬಳಸುವ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ವಸ್ತುವಿಷಯವೂ ಇದರಲ್ಲಿ ಸೇರಿತ್ತು.
ಇದಲ್ಲದೆ, ಕೃತಕ ಬುದ್ಧಿಮತ್ತೆ (AI) ಮಾದರಿಗಳ ತರಬೇತಿಗಾಗಿ ಇಂತಹ ತಿರುಚಿದ ವಸ್ತುವಿಷಯವನ್ನು ಬಳಸಲು ಅನುಮತಿಸಿದರೆ, ಅಂತಹ ದುರುಪಯೋಗ ಹೆಚ್ಚುತ್ತದೆ ಎಂದು ಅವರ ಪರ ವಕೀಲರು ಕಳವಳ ವ್ಯಕ್ತಪಡಿಸಿದ್ದರು.