
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಪ್ರಚಾರ ಮತ್ತು ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ಸಂಬಂಧ ದೆಹಲಿ ಹೈಕೋರ್ಟ್ ಪ್ರತಿವಾದಿಗಳಿಗೆ ಸೆಪ್ಟೆಂಬರ್ 9 ರಂದು ಮಧ್ಯಂತರ ತಡೆಯಾಜ್ಞೆ ವಿಧಿಸಿದೆ [ಐಶ್ವರ್ಯ ರೈ ಬಚ್ಚನ್ ಮತ್ತು ಐಶ್ವರ್ಯ ವರ್ಲ್ಡ್ ಡಾಟ್ ಕಾಂ ಮತ್ತಿತರರ ನಡುವಣ ಪ್ರಕರಣ].
ಅನುಮತಿ ಇಲ್ಲದೆ ಖ್ಯಾತನಾಮರ ವ್ಯಕ್ತಿತ್ವದ ಹಕ್ಕುಗಳನ್ನು ಬಳಸುವುದು ಅವರಿಗೆ ಕೇವಲ ಆರ್ಥಿಕ ನಷ್ಟವನ್ನಷ್ಟೇ ಉಂಟುಮಾಡುವುದಿಲ್ಲ ಬದಲಿಗೆ ಗೌರವ, ವರ್ಚಸ್ಸು, ಮಾನ ಹಾನಿಯಾಗಲು ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ಪ್ರತಿಯೊಬ್ಬರಿಗೂ ತಮ್ಮ ಹೆಸರು, ಫೋಟೋ, ಮುಖ, ಅಥವಾ ವ್ಯಕ್ತಿತ್ವದ ಲಕ್ಷಣಗಳನ್ನು ಹೇಗೆ ಬಳಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಇದೆ. ಇದು ಅವರು ಅನುಮತಿ ಕೊಟ್ಟಾಗ ಮಾತ್ರ ಇತರರು ಬಳಸಬಹುದು, ಇಲ್ಲದಿದ್ದರೆ ಬಳಸಲು ಸಾಧ್ಯವಿಲ್ಲ ಎಂಬ ಅವರ ಸ್ವಾಯತ್ತತೆಯಲ್ಲಿ ನೆಲೆಗೊಂಡಿದೆ ಎಂದು ನ್ಯಾಯಾಲಯ ಇದೇ ವೇಳೆ ಹೇಳಿತು.
"ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಗುಣಲಕ್ಷಣಗಳ ಅನಧಿಕೃತ ಶೋಷಣೆ ಎಂಬುದು ಎರಡು ಅಂಶಗಳನ್ನು ಒಳಗೊಂಡಿರಲಿದೆ- ಮೊದಲನೆಯದಾಗಿ, ಅವರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ವಾಣಿಜ್ಯಿಕವಾಗಿ ಶೋಷಣೆ ಮಾಡದಂತೆ ರಕ್ಷಿಸುವ ಹಕ್ಕಿನ ಉಲ್ಲಂಘನೆ; ಎರಡನೆಯದಾಗಿ, ಅವರ ಗೌಪ್ಯತೆಯ ಹಕ್ಕಿನ ಉಲ್ಲಂಘನೆ, ಇದು ಅವರ ಘನತೆಯಿಂದ ಬದುಕುವ ಹಕ್ಕನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ಒಬ್ಬರ ವ್ಯಕ್ತಿತ್ವ ಹಕ್ಕುಗಳ ಅನಧಿಕೃತ ಶೋಷಣೆಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕಣ್ಣುಮುಚ್ಚಿ ಕೂರುವಂತಿಲ್ಲ ಮತ್ತು ಅನಧಿಕೃತ ಶೋಷಣೆಯಿಂದ ಉಂಟಾಗುವ ಯಾವುದೇ ಹಾನಿಯನ್ನು ತಪ್ಪಿಸುವುದಕ್ಕಾಗಿ ನೊಂದ ಕಕ್ಷಿದಾರರನ್ನು ರಕ್ಷಿಸಬೇಕಾಗುತ್ತದೆ ಎಂದು ಅದು ಒತ್ತಿ ಹೇಳಿದೆ.
ತನ್ನ ಹಕ್ಕುಸ್ವಾಮ್ಯ, ಪ್ರದರ್ಶಕಿಯ ಹಕ್ಕುಗಳ ಉಲ್ಲಂಘನೆ, ವ್ಯಕ್ತಿತ್ವ, ಪ್ರಚಾರ ಹಕ್ಕುಗಳ ದುರುಪಯೋಗದ ಹಿನ್ನೆಲೆಯಲ್ಲಿ ಐಶ್ವರ್ಯ ಅವರು ಕೆಲವು ಜಾಲತಾಣಗಳು, ಕಂಪನಿ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಐಶ್ವರ್ಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೀಪ್ ಸೇಥಿ ಅವರು ನಟಿಯ ವರ್ಚಸ್ಸು, ಹೋಲಿಕೆ ಮತ್ತು ವ್ಯಕ್ತಿತ್ವವನ್ನು ಅನಧಿಕೃತ ವ್ಯಕ್ತಿಗಳು ಸರಕು ಮಾರಾಟ ಮಾಡಲು ಮಾತ್ರವಲ್ಲದೆ ಅಶ್ಲೀಲ ಉದ್ದೇಶಗಳಿಗಾಗಿಯೂ ಬಳಸುತ್ತಿದ್ದಾರೆ ಎಂದಿದ್ದರು.
ಐಶ್ವರ್ಯಾ ನೇಷನ್ ವೆಲ್ತ್ ಎಂಬ ಸಂಸ್ಥೆ ಐಶ್ವರ್ಯಾ ಅವರ ಚಿತ್ರವನ್ನು ತನ್ನ ಲೆಟರ್‌ಹೆಡ್‌ನಲ್ಲಿ ಬಳಸಿಕೊಂಡು ಆಕೆ ಸಂಸ್ಥೆಯ ಅಧ್ಯಕ್ಷೆ ಎಂದು ಹೇಳಿಕೊಂಡಿದೆ. ಇದಕ್ಕೂ ಐಶ್ವರ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ, ಸಂಸ್ಥೆಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ವಂಚನೆಯ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಅವರು ದೂರಿದ್ದರು.
ಐಶ್ವರ್ಯ ಅವರ ವ್ಯಕ್ತಿತ್ವ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು ಅದಕ್ಕೆ ಅವಕಾಶ ನೀಡುವುದರಿಂದ ಅವರಿಗೆ ಅಂತಹ ಕೃತ್ಯಗಳ ಬಗ್ಗೆ ಬೆಂಬಲವಿದೆ ಎಂಬ ಗ್ರಹಿಕೆ ಮೂಡಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವುದಲ್ಲದೆ ಅವರ ವರ್ಚಸ್ಸು ಮತ್ತು ಅವರ ಬಗ್ಗೆ ಇರುವ ಸದ್ಭಾವನೆ ದುರ್ಬಲಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ನ್ಯಾಯಾಲಯ ಐಶ್ವರ್ಯ ಅವರ ವ್ಯಕ್ತಿತ್ವ/ಪ್ರಚಾರದ ಹಕ್ಕುಗಳು, ನೈತಿಕ ಹಕ್ಕುಗಳನ್ನು ಉಲ್ಲಂಘಿಸದಂತೆ ಮತ್ತು ಅವರ ಸರಕು ಮತ್ತು ಸೇವೆಗಳನ್ನು ಆಕೆಯ ಅನುಮೋದನೆ ಪಡೆಯದೆ ವರ್ಗಾಯಿಸದಂತೆ ವಿವಿಧ ಪ್ರತಿವಾದಿಗಳಿಗೆ ನಿರ್ಬಂಧಿಸಿತು.
ಇದಲ್ಲದೆ, ಐಶ್ವರ್ಯಾ ಅವರ ಸಾರ್ವಜನಿಕ ವ್ಯಕ್ತಿತ್ವವನ್ನು ದುರ್ಬಲಗೊಳಿಸುವ ಯಾವುದೇ ಮಾಧ್ಯಮ ಮತ್ತು ಸ್ವರೂಪದಲ್ಲಿ ಕೃತಕ ಬುದ್ಧಿಮತ್ತೆ, ಉತ್ಪಾದಕ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡೀಪ್‌ಫೇಕ್‌ಗಳು, ಮುಖ ಮಾರ್ಫಿಂಗ್ ಬಳಸಿ ಯಾವುದೇ ಉತ್ಪನ್ನವನ್ನು ಸೃಷ್ಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡದಂತೆಯೂ ಅದು ನಿರ್ಬಂಧ ವಿಧಿಸಿತು.
ಈ ನಿಟ್ಟಿನಲ್ಲಿ, ಈ ಆದೇಶದ ಸೂಚನೆ ಪಡೆದ 72 ಗಂಟೆಗಳ ಒಳಗೆ ಅರ್ಜಿಯಲ್ಲಿ ಗುರುತಿಸಲಾದ ಯುಆರ್‌ಎಲ್‌ಗಳನ್ನು ತೆಗೆದುಹಾಕಲು ನ್ಯಾಯಾಲಯ ಇ- ವಾಣಿಜ್ಯ ವೇದಿಕೆ ಮತ್ತು ಗೂಗಲ್‌ಗೆ ನಿರ್ದೇಶನ ನೀಡಿತು. ಪ್ರತಿವಾದಿಗಳನ್ನು ಗುರುತಿಸಲು ಮೂಲ ಚಂದಾದಾರರ ಮಾಹಿತಿಯನ್ನು ಸಹ ಒದಗಿಸುವಂತೆ ಅವರಿಗೆ ಸೂಚಿಸಲಾಯಿತು.
ಎಲ್ಲಾ ಯುಆರ್‌ಎಲ್‌ಗಳನ್ನು ನಿರ್ಬಂಧಿಸಲು ಮತ್ತು ನಿಷ್ಕ್ರಿಯಗೊಳಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ತಂತ್ರಜ್ಞಾನ ಇಲಾಖೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಐಶ್ವರ್ಯ ಅವರ ಪತಿ ಅಭಿಷೇಕ್ ಬಚ್ಚನ್ ಕೂಡ ತಮ್ಮ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ಕುರಿತು ನ್ಯಾಯಾಲಯ ಇನ್ನಷ್ಟೇ ಆದೇಶ ಹೊರಡಿಸಬೇಕಿದೆ.