ಹಿಂದುತ್ವ ಪ್ರತಿಪಾದಕಿ ಪ್ರೊ. ಮಧು ಕಿಶ್ವರ್ ವಿರುದ್ಧದ 17 ವರ್ಷ ಹಿಂದಿನ ಕೊಲೆ ಯತ್ನ ಪ್ರಕರಣವನ್ನು ಈಚೆಗೆ ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ [ಪ್ರೊಫೆಸರ್ ಮಧು ಕಿಶ್ವರ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
2008 ರಲ್ಲಿ ಮಧು ಅವರ ಮಾನುಷಿ ಸಂಸ್ಥೆ ನಡೆಸುತ್ತಿರುವ ಯೋಜನೆಗಾಗಿ ಸೇವಾ ನಗರ ಬೀದಿ ಮಾರಾಟಗಾರರ ಮಾರುಕಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಗಲಾಟೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬಸೋಯಾ ಕುಟುಂಬದ ಸದಸ್ಯರು ಸಲ್ಲಿಸಿದ್ದ ದೂರಿನ ಮೇರೆಗೆ ಮಧು ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಬಸೋಯಾ ಕುಟುಂಬ ಈ ಪ್ರದೇಶದಲ್ಲಿ ಅವ್ಯವಹಾರ ನಡೆಸುತ್ತಿದೆ ಎಂದು ಮಧು ದೂರಿದ್ದರು.
ಬಸೋಯಾ ಕುಟುಂಬದ ವಿರುದ್ಧ ಈ ಹಿಂದೆ ಮಧು ಅವರು ಎಫ್‌ಐಆರ್ ಹೂಡಿದ್ದಕ್ಕಾಗಿ ದುರುದ್ದೇಶಪೂರ್ವಕವಾದ ಪ್ರತಿದಾಳಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅಕ್ಟೋಬರ್ 16 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರು ತಿಳಿಸಿದ್ದಾರೆ.
ಮಧು ಕಿಶ್ವರ್ ಈ ಹಿಂದೆ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸೋಯಾ ಕುಟುಂಬದ ಸದಸ್ಯರು ತಪ್ಪಿತಸ್ಥರು ಎಂದು ತೀರ್ಪು ಬಂದಿದೆ. ಹೀಗಾಗಿ ಮಧು ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಾಗಿದ್ದು ಈ ಸಂಬಂಧ ನಡೆಯುತ್ತಿರುವ ಎಲ್ಲಾ ವಿಚಾರಣೆಗಳನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಮಧು ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮೂಹಿಕ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸೇವಾ ನಗರ ಮಾರುಕಟ್ಟೆಯಲ್ಲಿ ಅಂಗಡಿ ಹಂಚಿಕೆ ಸಂಬಂಧ ಘರ್ಷಣೆ ಉಂಟಾಗಿತ್ತು. ಮಧು ತಮ್ಮ ಮೇಲೆ ಕಾರು ಚಲಾಯಿಸುವಂತೆ ಚಾಲಕನಿಗೆ ಸೂಚಿಸಿದರು. ಮಧು ಮತ್ತು ಅವರ ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿ ಗಂಭೀರ ಗಾಯಕ್ಕೆ ಕಾರಣವಾಗಿದ್ದಾರೆ ಎಂದು ಬಸೋಯಾ ಕುಟುಂಬ ದೂರಿತ್ತು.
ಇದನ್ನು ಒಪ್ಪದ ಮಧು, ತಾನು ಅದೇ ದಿನ ಆ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೆ. ತಮ್ಮ ಮೇಲೆ ದ್ವೇಷದಿಂದ ಪ್ರತಿ ಎಫ್ಐಆರ್ ದಾಖಲಿಸಲಾಗಿದೆ. ನಾನು ಹೂಡಿದ್ದ ಪ್ರಕರಣದಲ್ಲಿ ಬಸೋಯಾ ಕುಟುಂಬದ ಸದಸ್ಯರು ತಪ್ಪಿತಸ್ಥರೆಂದು ಸಾಬೀತಾಗಿತ್ತು. ಬಸೋಯಾ ಕುಟುಂಬದ ಅಕ್ರಮಗಳ ಬಗ್ಗೆ ಛಾಯಾಚಿತ್ರ ತೆಗೆಯುತ್ತಿದ್ದಾಗ ಕುಟುಂಬದ ಸದಸ್ಯರು ಅಕ್ರಮವಾಗಿ ಗುಂಪುಗೂಡಿ ತಮ್ಮ ಹಾಗೂ ತಮ್ಮ ಚಾಲಕನ ಮೇಲೆ ಹಲ್ಲೆ ಮಾಡಿತ್ತು ಎಂದು ಮಧು ವಾದಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ದೂರುದಾರರ ಆರೋಪಗಳನ್ನೇ ಒಪ್ಪಿಕೊಂಡರೂ ಇದೇ ಪ್ರಕರಣದಲ್ಲಿ ದೂರುದಾರರಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದೆ ಎಂಬ ಸಂಗತಿಯನ್ನು ಪರಿಗಣಿಸಿದರೆ ಅದರಲ್ಲಿಯೂ ದೂರುದಾರರು ಅಕ್ರಮ ಕೂಟ ಸೇರಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಜಿದಾರರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದರು. ಆ ಸಂದರ್ಭವನ್ನು ಗಮನಿಸಿದರೆ ಅದನ್ನೊಂದು ಸ್ವಯಂ ರಕ್ಷಣೆ ಅಥವಾ ವಾಗ್ವಾದದ ವೇಳೆ ನಡೆದ ಘಟನೆ ಎಂದಷ್ಟೇ ಪರಿಗಣಿಸಬಹುದಾಗಿದೆ ಎಂದ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿತು.
[ತೀರ್ಪಿನ ಪ್ರತಿ]