ಹಿಂದುತ್ವ ಐಸಿಸ್ ಹೋಲಿಕೆ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸಲು ಯುಪಿ ನ್ಯಾಯಾಲಯ ಆದೇಶ

ಖುರ್ಷಿದ್ ಅವರ ‘ಸನ್ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್‌ ಇನ್ ಅವರ್ ಟೈಮ್ಸ್ʼ ಕೃತಿಯ ಕೆಲವು ಭಾಗಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಶುಭಾಂಗಿ ತ್ಯಾಗಿ ಎಂಬವವರು ದೂರು ದಾಖಲಿಸಿದ್ದಾರೆ.
Salman Khurshid, book sunrise over Ayodhya

Salman Khurshid, book sunrise over Ayodhya

Published on

ತಮ್ಮ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್ʼ ಕೃತಿಯಲ್ಲಿ ಹಿಂದುತ್ವವನ್ನು ಬೋಕೋ ಹರಾಮ್ ಮತ್ತು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಹೋಲಿಸಿದ ಆರೋಪದ ಮೇಲೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಲಖನೌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉತ್ತರ ಪ್ರದೇಶ ಪೊಲೀಸರಿಗೆ ಆದೇಶಿಸಿದೆ.

Also Read
ಸಲ್ಮಾನ್ ಖುರ್ಷಿದ್ ಅವರ ಅಯೋಧ್ಯೆ, ಆರ್‌ಎಸ್‌ಎಸ್‌ ಕುರಿತಾದ ಪುಸ್ತಕ: ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ಕೋರ್ಟ್ ನಕಾರ

ಎಫ್‌ಐಆರ್ ದಾಖಲಿಸಿ ಮೂರು ದಿನಗಳ ಒಳಗಾಗಿ ಎಫ್‌ಐಆರ್‌ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಸೂಕ್ತ ಸೆಕ್ಷನ್‌ಗಳನ್ನು ವಿಧಿಸಿ ತನಿಖೆ ನಡೆಸುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಶಾಂತನು ತ್ಯಾಗಿ ಸೂಚಿಸಿದ್ದಾರೆ.

ಕೃತಿಯ ಕೆಲ ಭಾಗಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಶುಭಾಂಗಿ ತ್ಯಾಗಿ ಎಂಬವವರು ದೂರು ದಾಖಲಿಸಿದ್ದರು. ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಮೊದಲು ದೆಹಲಿ ಹೈಕೋರ್ಟ್‌ ಮುಂದೆಯೂ ಸಹ ಖುರ್ಷಿದ್‌ ಅವರ ಪುಸ್ತಕವನ್ನು ನಿಷೇಧಿಸುವಂತೆ ಕೋರಿ ಅರ್ಜಿಯೊಂದು ದಾಖಲಾಗಿತ್ತು. ಆದರೆ ನ.25ರಂದು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡಸಿದ್ದ ನ್ಯಾ. ಯಶ್ವಂತ್ ವರ್ಮ ಅವರು ಒಂದು ವೇಳೆ ಜನರಿಗೆ ಪುಸ್ತಕ ಇಷ್ಟವಾಗಲಿಲ್ಲ ಎಂದರೆ ಅವರಿಗೆ ಅದನ್ನು ಕೊಳ್ಳದೆ ಇರುವ ಆಯ್ಕೆ ಇದೆ ಎಂದು ಹೇಳಿದ್ದರು.

ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಪುಸ್ತಕದಲ್ಲಿರುವ ವಿವಾದಾತ್ಮಕ ಸಾಲುಗಳು ಹೀಗಿವೆ: "ಯೋಗಿಗಳಿಗೆ ತಿಳಿದಿದ್ದ ಸನಾತನ ಧರ್ಮ ಅಥವಾ ಪ್ರಾಚೀನ ಹಿಂದೂಧರ್ಮವನ್ನು ಇತ್ತೀಚಿನ ವರ್ಷಗಳಲ್ಲಿ ಉಗ್ರ ಹಿಂದುತ್ವವಾದದಿಂದ ಬದಿಗೆ ಸರಿಲಾಗಿದ್ದು ಇದು ರಾಜಕೀಯ ಸ್ವರೂಪದಲ್ಲಿ ಜಿಹಾದಿ ಇಸ್ಲಾಂ ಗುಂಪುಗಳಾದ ಐಸಿಸ್‌, ಬೊಕೊ ಹರಾಮ್‌ಗೆ ಎಲ್ಲ ರೀತಿಯಲ್ಲೂ ಸರಿಸಮನಾಗಿದೆ."

Kannada Bar & Bench
kannada.barandbench.com