ದೆಹಲಿಯ ಬಹದ್ದೂರ್ ಷಾ ಜಾಫರ್ ರಸ್ತೆಯ ಕಚೇರಿ ತೆರವುಗೊಳಿಸುವಂತೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಕೇಂದ್ರ ಸರ್ಕಾರ 47 ವರ್ಷ ಹಿಂದೆ ನೀಡಿದ್ದ ನೋಟಿಸನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಭಾರತ ಒಕ್ಕೂಟ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ನ್ಯೂಸ್ ಪೇಪರ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಅಂದಿನ ಸರ್ಕಾರ ಪತ್ರಿಕಾ ಸಂಸ್ಥೆಯನ್ನು ಅದು ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡದಿಂದ ತೆರವುಗೊಳಿಸಲು ನೋಟಿಸ್ ನೀಡಿದ್ದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನಿಗ್ರಹ ಮತ್ತು ಪತ್ರಿಕೆಯ ಆದಾಯ ಮೂಲ ಹತ್ತಿಕ್ಕುವ ಯತ್ನ ಎಂದು ನ್ಯಾಯಾಲಯ ತೀರ್ಪು ನೀಡಿತು.
ಗುತ್ತಿಗೆ ಮುಕ್ತಾಯಗೊಂಡಿದೆ ಎಂಬ ನೋಟಿಸನ್ನು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸರ್ಕಾರ ಎಂದಿಗೂ ನೀಡಿರಲಿಲ್ಲ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ತಿಳಿಸಿದರು.
ಸರ್ಕಾರದ ಕಾಯಿದೆಗಳು ಕಾನೂನುಬಾಹಿರ ಕೃತ್ಯಗಳಾಗಿದ್ದು ಸುಮಾರು ಐದು ದಶಕಗಳಿಂದ ವ್ಯಾಜ್ಯವನ್ನು ಎಳೆದಾಡಿರುವುದರಿಂದ ಪತ್ರಿಕೆಗೇ ಸರ್ಕಾರ ₹ 5 ಲಕ್ಷ ದಂಡ ಪಾವತಿಸಬೇಕೆಂದು ನ್ಯಾಯಾಲಯ ಹೇಳಿದೆ.
ಎಕ್ಸ್‌ಪ್ರೆಸ್ ಕಟ್ಟಡ ಎಂದು ಕರೆಯಲಾಗುವ ಕಟ್ಟಡಕ್ಕಾಗಿ ಭೂಮಿಯನ್ನು 1950 ರ ದಶಕದಲ್ಲಿ ಜವಾಹರಲಾಲ್ ನೆಹರು ಸರ್ಕಾರವ ಪತ್ರಿಕೆಯ ಸಂಸ್ಥಾಪಕ ರಾಮ್ ನಾಥ್ ಗೋಯೆಂಕಾ ಅವರಿಗೆ ನೀಡಿತ್ತು. ಆರಂಭದಲ್ಲಿ ತಿಲಕ್ ಸೇತುವೆ ಬಳಿ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಪಂಡಿತ್ ನೆಹರೂ ಅವರ ಕೋರಿಕೆಯ ಮೇರೆಗೆ, ಆಸ್ತಿ ಒಪ್ಪಿಸಿದ ಗೋಯೆಂಕಾ ಅವರು ಬದಲಿಗೆ ಬಹದ್ದೂರ್ ಷಾ ಜಾಫರ್ ರಸ್ತೆಯಲ್ಲಿ ನಿವೇಶನ ಪಡೆದಿದ್ದರು.
ಆದರೆ 1980 ರಲ್ಲಿ ಈ ಕಚೇರಿಯನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ನೋಟಿಸ್ ನೀಡಿತು. ಇದು ತುರ್ತು ಪರಿಸ್ಥಿತಿ ವೇಳೆ ಸರ್ಕಾರದ ಅತಿರೇಕಗಳನ್ನು ವರದಿ ಮಾಡಿದ್ದಕಾಗಿ ತೆಗೆದುಕೊಂಡ ಪ್ರತಿಕಾರದ ಕ್ರಮ ಎಂದು ಪತ್ರಿಕೆ ವಾದಿಸಿತ್ತು.
ಸರ್ಕಾರದ ಆದೇಶ ಪ್ರಶ್ನಿಸಿ ಪತ್ರಿಕಾ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 1986 ರಲ್ಲಿ ಎಕ್ಸ್‌ಪ್ರೆಸ್ ನ್ಯೂಸ್ ಪೇಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ವಿಖ್ಯಾತ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಸರ್ಕಾರದ ನೋಟಿಸ್ ರದ್ದುಗೊಳಿಸಿತ್ತು. ಇದು ಸಂವಿಧಾನದ 19 (1) (ಎ) ಮತ್ತು (ಜಿ) ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ನೋಟಿಸ್ ನೀಡಿತ್ತು.
ತೀರ್ಪು ಪ್ರಕಟವಾದ ಸ್ವಲ್ಪ ದಿನಗಳ ಬಳಿಕ ಸರ್ಕಾರ ಮತ್ತೆ ನೋಟಿಸ್ ನೀಡಲಾರಂಭಿಸಿತ್ತು. ತಮಗೆ ನೋಟಿಸ್ ನೀಡದೆಯೇ ತೆರವು ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ದೂರಿತ್ತು. ಇತ್ತ ಸರ್ಕಾರ ಹೈಕೋರ್ಟ್‌ನಲ್ಲಿ ದಾವೆ ಹೂಡಿದರೆ ಪತ್ರಿಕೆ ಕೂಡ ಪ್ರಕರಣ ದಾಖಲಿಸಿತು.
ಕಚೇರಿಯನ್ನು ಪತ್ರಿಕೆ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡಿದೆ ಎಂದು ವಾದಿಸಿದ್ದ ಸರ್ಕಾರ ತನಗೆ ಪತ್ರಿಕೆ ₹17,684 ಕೋಟಿ ಬಾಕಿ ಪಾವತಿಸಬೇಕು ಎಂದು ಆರಂಭದಲ್ಲಿ ಹೇಳಿತ್ತು. ನಂತರ ಆ ಮೊತ್ತವನ್ನು ₹765 ಕೋಟಿಗೆ ಇಳಿಸಿತ್ತು. ಇದೊಂದು ಅಸಮಂಜಸ ಮತ್ತು ಅತಿರೇಕದ ಮೊತ್ತ ಎಂದಿರುವ ಹೈಕೋರ್ಟ್ ಸರ್ಕಾರ ನೀಡಿರುವ ಹೊಸ ನೋಟಿಸ್ 1986 ರಲ್ಲಿ "ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಸಂಪೂರ್ಣ ನಿರ್ಲಕ್ಷ್ಯ. ಅಲ್ಲದೆ ಪತ್ರಿಕೆ ಪಾವತಿಸಬೇಕಿರುವುದು ಕೇವಲ ₹64 ಲಕ್ಷ ಎಂದು ಹೈಕೋರ್ಟ್ ಆದೇಶಿಸಿದೆ.