Prannoy Roy and Radhika Roy  
ಸುದ್ದಿಗಳು

ಪ್ರಣಯ್, ರಾಧಿಕಾ ರಾಯ್ ವಿರುದ್ಧದ ಐಟಿ ನೋಟಿಸ್ ರದ್ದುಗೊಳಿಸಿದ ದೆಹಲಿ ಹೈಕೋರ್ಟ್; ತೆರಿಗೆ ಇಲಾಖೆಗೆ ₹2 ಲಕ್ಷ ದಂಡ

ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ಗೆ ನೀಡಲಾಗಿದ್ದ ಕೆಲ ಬಡ್ಡಿರಹಿತ ಸಾಲಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿತ್ತು.

Bar & Bench

ಎನ್‌ಡಿಟಿವಿ ಪ್ರವರ್ತಕ ಆರ್‌ಆರ್‌ಪಿಆರ್‌ ಹೋಲ್ಡಿಂಗ್ ಜೊತೆಗಿನ ವಹಿವಾಟುಗಳಿಗೆ ಸಂಬಂಧಿಸಿದಂತೆ 2016ರಲ್ಲಿ ಸುದ್ದಿವಾಹಿನಿಯ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರಿಗೆ ನೀಡಲಾಗಿದ್ದ ಆದಾಯ ತೆರಿಗೆ  ನೋಟಿಸ್‌ ರದ್ದುಗೊಳಿಸಿರುವ ದೆಹಲಿ ಹೈಕೋರ್ಟ್ ಐ ಟಿ ಇಲಾಖೆಗೆ ₹2 ಲಕ್ಷ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೋದ್‌ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ದಂಡ ವಿಧಿಸಿದರೂ ಸಾಲದು ಎಂದ ನ್ಯಾಯಾಲಯ ಆದರೂ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ಅವರಿಗೆ ತಲಾ ₹1 ಲಕ್ಷ ದಂಡವನ್ನು ಸಾಂಕೇತಿಕವಾಗಿ ಪಾವತಿಸಬೇಕು ಎಂದು ಆದೇಶಿಸಿತು.

ಎರಡೂ ರಿಟ್ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಅರ್ಜಿದಾರರಿಗೆ ಮಾರ್ಚ್ 31, 2016ರಂದು ನೀಡಲಾದ ನೋಟಿಸ್‌ಗಳು ಹಾಗೂ ಅವುಗಳ ಆಧಾರದಲ್ಲಿ ಕೈಗೊಳ್ಳಲಾದ ಯಾವುದೇ ಆದೇಶಗಳು ಅಥವಾ ಕ್ರಮಗಳನ್ನು ರದ್ದುಗೊಳಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ದಂಡ ವಿಧಿಸಿದರೂ ಸಾಲದು. ಪ್ರತಿವಾದಿಗಳು  ಪ್ರತಿ ಅರ್ಜಿದಾರರಿಗೆ ತಲಾ ₹1 ಲಕ್ಷದ ಸಂಕೇತಾತ್ಮಕ ದಂಡ ಪಾವತಿಸಬೇಕು,” ಎಂದು ನ್ಯಾಯಾಲಯ ಆದೇಶಿಸಿತು. ಇದಲ್ಲದೆ, ನೋಟಿಸ್‌ ಆಧಾರದ ಮೇಲೆ ಕೈಗೊಂಡ ಎಲ್ಲಾ ಕ್ರಮಗಳನ್ನೂ ರದ್ದುಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಎನ್‌ಡಿಟಿವಿ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್‌ಗೆ ನೀಡಲಾಗಿದ್ದ ಕೆಲ ಬಡ್ಡಿರಹಿತ ಸಾಲಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು.

ಆದಾಯ ತೆರಿಗೆ ನೋಟಿಸ್‌ಗಳ ವಿರುದ್ಧ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ನವೆಂಬರ್ 2017ರಲ್ಲಿ ಹೈಕೋರ್ಟ್ ಮೊರೆಹೋಗಿದ್ದರು. ಒಂದೇ ತೆರಿಗೆ ನಿರ್ಧರಣಾ ವರ್ಷಕ್ಕೆ ಸಂಬಂಧಿಸಿ ಎರಡನೇ ಬಾರಿ ನೋಟಿಸ್‌ ನೀಡಲಾಗಿದೆ ಎಂದು ಅವರು ವಾದಿಸಿದ್ದರು.

ಐಟಿ ಅಧಿಕಾರಿಗಳು ಜುಲೈ 2011 ರಲ್ಲಿ  ತೆರಿಗೆ ನಿರ್ಧರಣೆ ನಡೆಸಿದ್ದರೂ  ಇದೇ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಮಾರ್ಚ್ 2013 ರಲ್ಲಿ ಮರು ತೆರಿಗೆ ನಿರ್ಧರಣಾ ಆದೇಶ ಹೊರಡಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ "ಹಿಂದಿನ ಮೌಲ್ಯಮಾಪನವು ಸೀಮಿತವಾಗಿತ್ತು" ಎಂದು ಹೇಳಿತ್ತು.

ಇದನ್ನು ರಾಯ್‌ ದಂಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮರು ತೆರಿಗೆ ನಿರ್ಧರಣೆ ಆರಂಭಿಸಿದರೆ ಕಡಿಮೆ ಮೌಲ್ಯೀಕರಣ ಮಾಡಿರುವುದರ ಬಗ್ಗೆ ಪರಿಶೀಲನೆ ನಡೆಸಬಹುದು. ಆದರೆ ಇಡೀ ಪ್ರಕರಣವನ್ನೇ ಮತ್ತೆ ಪರಿಶೀಲನೆಗೊಳಪಡಿಸಿದರೆ ಅದು ಕಾನೂನಿಗೆ ವಿರುದ್ಧ ಎಂದರು.   

ಅಲ್ಲದೆ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ವಿರುದ್ಧ ಸಮಾನಾಂತರವಾಗಿ ಮರು ತೆರಿಗೆ ನಿರ್ಧಾರಕ್ಕೆ ಸಂಬಂಧಿಸಿದ ವಿಚಾರಣೆ ಹೈಕೋರ್ಟ್‌ನಲ್ಲಿ ಈಗಾಗಲೇ ನಡೆಯುತ್ತಿದ್ದು ಅಂತಿಮ ಆದೇಶಗಳ ಮೇಲೆ ತಡೆಯಾಜ್ಞೆ ಜಾರಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಆರ್‌ಆರ್‌ಪಿಆರ್‌ಗೆ ನೀಡಿದ್ದ ನೋಟಿಸ್ ಅನ್ನು ಹೈಕೋರ್ಟ್‌ನ ಮತ್ತೊಂದು ಪೀಠವು ಸೆಪ್ಟೆಂಬರ್ 2024ರಲ್ಲಿ ರದ್ದುಗೊಳಿಸಿತ್ತು.