Delhi High Court, India Today
Delhi High Court, India Today  
ಸುದ್ದಿಗಳು

ʼಇಂಡಿಯಾ ಟುಡೆʼ ಪತ್ರಕರ್ತರಿಗೆ ಕಾಶ್ಮೀರ ಪೊಲೀಸರು ನೀಡಿದ್ದ ಸಮನ್ಸ್ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

Bar & Bench

ಕೋವಿಡ್‌ ಸಾಂಕ್ರಾಮಿಕ ಹರಡಿದ್ದ ವೇಳೆ ಅನಾಥ ಮಕ್ಕಳನ್ನು ಹಣಕ್ಕೆ ದತ್ತು ನೀಡಲಾಗುತ್ತಿದೆ ಎಂಬ ತನಿಖಾ ವರದಿ ಪ್ರಸಾರ ಮಾಡಿದ್ದ ʼಇಂಡಿಯಾ ಟುಡೆʼಯ ಇಬ್ಬರು ಪತ್ರಕರ್ತರಿಗೆ ಜಮ್ಮು ಕಾಶ್ಮೀರ ಪೊಲೀಸರು ನೀಡಿದ್ದ ಸಮನ್ಸನ್ನು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ರದ್ದುಗೊಳಿಸಿದೆ. [ಜಮ್‌ಶೆದ್‌ ಆದಿಲ್‌ ಖಾನ್‌ ಮತ್ತಿತರರು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಇನ್ನಿತರರ ನಡುವಣ ಪ್ರಕರಣ].

ಪತ್ರಕರ್ತರು ದೆಹಲಿ ಮತ್ತು ನೋಯ್ಡಾ ನಿವಾಸಿಗಳಾಗಿರುವುದರಿಂದ ಕಾಶ್ಮೀರ ಪೊಲೀಸರಿಗೆ ಸಮನ್ಸ್‌ ನೀಡಲು ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿ ಪೂನಂ ಎ ಬಾಂಬಾ ಅಭಿಪ್ರಾಯಪಟ್ಟಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 160ರ ಪ್ರಕಾರ, ಒಬ್ಬ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಅಥವಾ ಪಕ್ಕದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಜನರಿಗೆ ಮಾತ್ರ ಸಮನ್ಸ್ ನೀಡಬಹುದಾಗಿದೆ. ಮಾರ್ಚ್ 17, 2022 ರಲ್ಲಿ ನೀಡಲಾಗಿದ್ದ ಸಮನ್ಸ್‌ ರದ್ದುಗೊಳಿಸುವಂತೆ ಕೋರಿ ಇಬ್ಬರೂ ಪತ್ರಕರ್ತರು ನ್ಯಾಯಾಲಯದ ಮೊರೆ ಹೋಗಿದ್ದರು.

ಪತ್ರಕರ್ತರ ತನಿಖಾ ವರದಿ ಆಧರಿಸಿ ಅಧಿಕೃತವಾಗಿ ಪ್ರಕರಣ ದಾಖಲಿಸುವಂತೆ , ಪುಲ್ವಾಮಾದ ಮಕ್ಕಳ ಕಲ್ಯಾಣ ಸಮಿತಿ ಪಾಂಪೋರ್‌ ಪೊಲೀಸರಿಗೆ ದೂರು ನೀಡಿತ್ತು. ಕಾಶ್ಮೀರ ಪೊಲೀಸರು ಮತ್ತು ದೆಹಲಿ ಪೊಲೀಸ್‌ ಮಾನವ ಕಳ್ಳ ಸಾಗಣೆ ನಿಗ್ರಹ ದಳಕ್ಕೆ ಅಗತ್ಯ ಮಾಹಿತಿಯನ್ನು ಪತ್ರಕರ್ತರು ಪ್ರತಿನಿಧಿಸುವ ಸುದ್ದಿ ವಾಹಿನಿ ನೀಡಿತ್ತು. ಆದರೂ ಮಾರ್ಚ್ 17 ರಂದು, ಕಾಶ್ಮೀರ ಪೊಲೀಸರು ಪತ್ರಕರ್ತರಿಗೆ ಸಮನ್ಸ್ ಜಾರಿ ಮಾಡಿ ಎರಡು ದಿನಗಳೊಳಗೆ ಪಾಂಪೋರ್ ಪೊಲೀಸ್ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು.

ಸಿಆರ್‌ಪಿಸಿಯ ಸೆಕ್ಷನ್ 160 (1)ರ ಸ್ಪಷ್ಟವಾಗಿ ಹೇಳುವ ಪ್ರಕಾರ ತನಿಖೆಯ ಉದ್ದೇಶಗಳಿಗಾಗಿ ಪೊಲೀಸ್‌ ಅಧಿಕಾರಿ ತಾನು ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಠಾಣೆ ಅಥವಾ ಪಕ್ಕದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ವ್ಯಕ್ತಿ ಮಾತ್ರ ಹಾಜರಾಗುವಂತೆ ಸೂಚಿಸಬಹುದಾಗಿದ್ದು ಈ ಪ್ರಾದೇಶಿಕ ಮಿತಿ ಮೀರಿದವರು ತನಿಖೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಆದರೆ, ಅಗತ್ಯಬಿದ್ದರೆ ದೆಹಲಿಯಲ್ಲಿರುವ ಪತ್ರಕರ್ತರನ್ನು ತನಿಖಾ ಸಂಸ್ಥೆ ತನಿಖೆ ನಡೆಸುವುದಕ್ಕೆ ತನ್ನ ಆದೇಶ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.