Indian Air Force and Delhi High Court 
ಸುದ್ದಿಗಳು

ಅರ್ಹ ಮಹಿಳೆಯರಿದ್ದರೂ ವಾಯುಪಡೆಯ 20 ಹುದ್ದೆ ಖಾಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತರಾಟೆ

ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ನಡುವೆ ತಾರತಮ್ಯ ಮಾಡಬಹುದಾದ ಕಾಲ ಇದಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಮರ್ಥ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ, ಭಾರತೀಯ ವಾಯುಪಡೆಯಲ್ಲಿ (ಐಎಎಫ್) 20 ಹುದ್ದೆಗಳನ್ನು ಖಾಲಿ ಇಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಶ್ರೀಮತಿ ಅರ್ಚನಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ಕಕರಣ].

2023ರ ಎನ್‌ಡಿಎ II ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದ್ದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧಿಸೂಚನೆ 92 ವಾಯುಪಡೆಯ 'ಫ್ಲೈಯಿಂಗ್' ಹುದ್ದೆಗಳಲ್ಲಿ ಎರಡು ಹುದ್ದೆಗಳು ಮಹಿಳೆಯರಿಗೆʼ ಎಂದು ಹೇಳಿದ್ದರೂ, ಉಳಿದ 90 ಹುದ್ದೆಗಳು ಪುರುಷರಿಗೆ ಮೀಸಲು ಎಂದು ಅರ್ಥವಲ್ಲ. ಬದಲಿಗೆ ಅವು ಎಲ್ಲ ಅಭ್ಯರ್ಥಿಗಳಿಗೂ ಮುಕ್ತವಾಗಿದ್ದವು ಎಂಬುದಾಗಿ ನ್ಯಾಯಮೂರ್ತಿ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ.

ಪುರುಷ ಅಭ್ಯರ್ಥಿಗಳ ಕೊರತೆಯಿಂದಾಗಿ 20 ಹುದ್ದೆಗಳು ಖಾಲಿ ಇದ್ದರೂ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಖಾಲಿ ಇರುವ 20 ಹುದ್ದೆಗಳಲ್ಲಿ ಒಂದಕ್ಕೆ ಮಹಿಳಾ ಅರ್ಹತಾ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದ ಅರ್ಜಿದಾರೆ ಅರ್ಚನಾ ಅವರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು.

ಮೇ 17, 2023ರ ಪರೀಕ್ಷಾ ಅಧಿಸೂಚನೆಗೆ ಸಂಬಂಧಿಸಿದಂತೆ ಭರ್ತಿಯಾಗದ 20 ವಾಯುಪಡೆ ಫ್ಲೈಯಿಂಗ್ ಹುದ್ದೆಗಳಲ್ಲಿ ಒಂದಕ್ಕೆ ಅರ್ಜಿದಾರರನ್ನು ತಕ್ಷಣವೇ ನೇಮಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಲಾಗಿದೆ. ಆಯ್ಕೆಯಾಗಿ ನೇಮಕಗೊಂಡ ಉಳಿದ 70 ಪುರುಷ ಮತ್ತು 2 ಮಹಿಳಾ ಅಭ್ಯರ್ಥಿಗಳಂತೆ ಹಿರಿತನವೂ ಸೇರಿದಂತೆ ಎಲ್ಲಾ ಸೇವಾ ಸವಲತ್ತುಗಳಿಗೆ ಅರ್ಚನಾ ಅವರನ್ನು  ಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು.

ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ನಡುವೆ ತಾರತಮ್ಯ ಮಾಡಬಹುದಾದ ಕಾಲದಲ್ಲಿ ನಾವು ಇಲ್ಲ.
ದೆಹಲಿ ಹೈಕೋರ್ಟ್

ಸಶಸ್ತ್ರಪಡೆಗಳು ನೇಮಕಾತಿಗಾಗಿ ಷರತ್ತುಗಳನ್ನು ವಿಧಿಸಬಹುದಾದರೂ ಆ ಷರತ್ತುಗಳಿಗೆ ಬದ್ಧವಾಗಿರುವ ಅಭ್ಯರ್ಥಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಬುದ್ಧಿವಾದ ಹೇಳಿತು.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳ ಮೂಸೆಯಲ್ಲಿ, ಯಾವುದೇ ನಿಯಮ ಅಥವಾ ಜಾಹೀರಾತನ್ನು ಲಿಂಗದ ಆಧಾರದ ಮೇಲೆ ವ್ಯಾಖ್ಯಾನಿಸಲಾಗದು. ಈಗಿನ ಕಾಲದಲ್ಲಿ ಪುರುಷ–ಮಹಿಳೆಯ ನಡುವೆ ವ್ಯತ್ಯಾಸ ಇದೆ ಎನ್ನುವುದು ಹೆಚ್ಚು ಪ್ರಸ್ತುತವಲ್ಲ.  ಈಗ ಲಿಂಗ ಸಮಾನತೆ  ಅಳವಡಿಸಿಕೊಳ್ಳುವ ಸಮಯ ಬಂದಿದೆ ಎಂದು ಅದು ತಿಳಿಸಿತು.

[ತೀರ್ಪಿನ ಪ್ರತಿ]

Ms_Archana_v_Union_of_India___Ors.pdf
Preview