Delhi High Court  
ಸುದ್ದಿಗಳು

ವ್ಯಾಜ್ಯ ಇತ್ಯರ್ಥವಾಗಿದ್ದರೂ ಪತಿ ವಿರುದ್ಧದ ಪ್ರಕರಣ ರದ್ದತಿಗೆ ದೆಹಲಿ ಹೈಕೋರ್ಟ್ ಒಲ್ಲೆ ಎಂದಿದ್ದೇಕೆ?

ವೈವಾಹಿಕ ಸಂಬಂಧಗಳ ಕುರಿತಾದ ಅಪರಾಧಕ್ಕೆ ತುತ್ತಾದವರು ಇತ್ಯರ್ಥ ನಿರಾಕರಿಸಿ ಅದನ್ನು ವಿರೋಧಿಸಿದ್ದರೆ ಆಗ ಅಂತಹ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವನ್ನು ವಾಡಿಕೆಯ ರೀತಿಯಲ್ಲಿ ರದ್ದುಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಪತ್ನಿಗೆ ₹ 45 ಲಕ್ಷ ಪಾವತಿಸಿ ಇತ್ಯರ್ಥಕ್ಕೆ ಬಂದಿದ್ದರೂ, ಆಕೆ ತನ್ನ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಪ್ರಕರಣ ರದ್ದುಗೊಳಿಸದೆ ಇರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ವ್ಯಾಜ್ಯ ಇತ್ಯರ್ಥಗೊಂಡಿದ್ದರೂ ಪತಿ ಪ್ರಕರಣ ಇತ್ಯರ್ಥದ ವೇಳೆ ವಿಧಿಸಲಾಗಿದ್ದ ನಿಯಮ ಪಾಲಿಸಿಲ್ಲ. ಜೊತೆಗೆ ಹೆಂಡತಿ ವಿರುದ್ಧ ಚಿತ್ರಹಿಂಸೆ ಮತ್ತು ಕ್ರೌರ್ಯಮೆರೆದಿದ್ದಾನೆ ಎಂದ ನ್ಯಾ. ಚಂದ್ರ ಧಾರಿ ಸಿಂಗ್ ಐಪಿಸಿ ಸೆಕ್ಷನ್‌ 498 ಎ ಹೂಡಲಾಗಿದ್ದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತು.

ವ್ಯಾಜ್ಯ ಇತ್ಯರ್ಥದ ವೇಳೆ ನೀಡಲಾಗಿದ್ದ ಮೊತ್ತವನ್ನು ಕೂಡ ಆತ ಹಿಂಪಡೆದಿದ್ದು ತಾನು ಅಂಗಡಿ ನಿರ್ವಹಿಸಿ ದುಡಿದಿದ್ದ ಹಣವನ್ನೂ ಕಿತ್ತುಕೊಂಡಿದ್ದಾನೆ ಎಂಬ ಪತ್ನಿಯ ವಾದವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಪತ್ನಿಯ ವ್ಯಾಜ್ಯ ಕಾರಣ ಈಗಲೂ ಮುಂದುವರೆದಿದೆ ಎಂದಿತು.

 ದೋಷಾರೋಪ ಮಾಡಿದ್ದ ಎಫ್‌ಐಆರ್‌ ರದ್ದುಗೊಳಿಸಲು ಯಾವುದೇ ಕಾರಣ ಇಲ್ಲ. ಏಕೆಂದರೆ ವ್ಯಾಜ್ಯ ಕಾರಣ ಇನ್ನೂ ಮುಂದುವರೆದಿದ್ದು ಪರಿಹಾರವನ್ನು ಪತಿ ನೀಡಿಲ್ಲ ಮತ್ತು ಹೆಂಡತಿಗೆ ಚಿತ್ರಹಿಂಸೆ ಹಾಗೂ ಕಿರುಕುಳ ನೀಡಿದ್ದಾನೆ. ಇದು ಐಪಿಸಿ ಸೆಕ್ಷನ್‌ ಸೆಕ್ಷನ್‌ 498 ಎ ಅಡಿ ಇದು ಅಪರಾಧವಾಗುತ್ತದೆ. ಎಫ್‌ಐಆರ್‌ ಅಡಿ ಉಲ್ಲೇಖಿಸಲಾದ ಆರೋಪ ಹೊತ್ತಿರುವ ಆತನ ನಡೆ ಈಗಲೂ ಕ್ರಿಮಿನಲ್‌ ಸ್ವರೂಪದ್ದಾಗಿರುವುದರಿಂದ ಈ ನ್ಯಾಯಾಲಯದ ಅಂತರ್ಗತ ಅಧಿಕಾರ ಚಲಾಯಿಸುವ ಯಾವುದೇ ಪ್ರತಿಪಾದನೆ ಮಂಡಿಸಲು ಆತನಿಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ರದ್ದುಗೊಳಿಸಲು ವ್ಯಾಪಕವಾದ ಅಂತರ್ಗತ ಅಧಿಕಾರವನ್ನು ಹೊಂದಿದ್ದರೂ, ಅದನ್ನು ಮಿತವಾಗಿ ಬಳಸಬೇಕು ಜೊತೆಗೆ ಸಮಾಜಕ್ಕೆ ಯಾವುದೇ ತೊಂದರೆ ಉಂಟಾಗದ ಸಂದರ್ಭದಲ್ಲಿ ಮಾತ್ರ ಬಳಸಬೇಕು ಎಂದು ನ್ಯಾಯಾಲಯ ನುಡಿದಿದೆ.

ವೈವಾಹಿಕ ಸಂಬಂಧಗಳ ಕುರಿತಾದ ಅಪರಾಧಕ್ಕೆ ಬಲಿಯಾದವರು ಇತ್ಯರ್ಥ ನಿರಾಕರಿಸಿ ಸಂಬಂಧವನ್ನು ವಿರೋಧಿಸಿದ್ದರೆ ಆಗ ಅಂತಹ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವನ್ನು ವಾಡಿಕೆಯ ರೀತಿಯಲ್ಲಿ ರದ್ದುಗೊಳಿಸಬಾರದು ಎಂದು ಕೂಡ ಅದು ಹೇಳಿದೆ.

2012ರಲ್ಲಿ ಈ ಜೋಡಿ ವಿವಾಹವಾಗಿತ್ತು. ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ 2015ರಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. 2016 ರಲ್ಲಿ ಒಡಂಬಡಿಕೆ ಮೂಲಕ ದಂಪತಿ ವಿವಾದ ಇತ್ಯರ್ಥಪಡಿಸಿಕೊಂಡಿದ್ದರು. ಒಪ್ಪಂದದಂತೆರ ಪತ್ನಿಗೆ ಪತಿ  ₹45 ಲಕ್ಷ ಪಾವತಿಸಬೇಕು ಹಾಗೂ ಪತ್ನಿ ಆತನ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣ ಹಿಂಪಡೆಯಬೇಕಿತ್ತು.

ಮತ್ತೆ ಜೀವನದಲ್ಲಿ ಒಂದಾಗಿದ್ದ ದಂಪತಿ ಮಗುವಿಗೆ ಜನ್ಮ ಕೂಡ ನೀಡಿದ್ದರು. ಆದರೆ 2017 ರಲ್ಲಿ, ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಪತಿ ನೀಡಿದ ದೈಹಿಕ ಮತ್ತು ಮಾನಸಿಕ ಕ್ರೌರ್ಯ ನಡೆದಿದ್ದ ಹಿನ್ನೆಲೆಯಲ್ಲಿ ಹೆಂಡತಿ ತನ್ನ ವೈವಾಹಿಕ ಗೃಹ ತೊರೆದಿದ್ದರು.

ವಿಚಾರಣಾ ನ್ಯಾಯಾಲಯ 2022 ರಲ್ಲಿ ಪತಿ ವಿರುದ್ಧ ಆರೋಪ ನಿಗದಿಪಡಿಸಿತ್ತು. ಪತಿ ನಿತ್ಯ ಮದ್ಯಪಾನ ಮಾಡುತ್ತಿದ್ದು ಸಾಕಷ್ಟು ವರದಕ್ಷಿಣೆ ತಂದಿಲ್ಲ ಎಂದು ದೈಹಿಕವಾಗಿ ಮತ್ತು ಮೌಕಿಖವಾಗಿ ದಾಳಿ ನಡೆಸುತ್ತಿದ್ದ. ವಿಚ್ಛೇದನ ಜಾರಿಯಾಗದ ಕಾರಣ ಒಡಂಬಡಿಕೆ ಅನೂರ್ಜಿತಗೊಳ್ಳಬೇಕು. ಒಪ್ಪಂದದಂತೆ ತನಗೆ ನೀಡಲಾಗಿದ್ದ ಹಣವನ್ನು ಕೂಡ ಆತ ಹಿಂಪಡೆದಿದ್ದಾನೆ ಎಂದು ಪತ್ನಿ ವಾದಿಸಿದ್ದರು. ಆದರೆ ಈ ವಾದಗಳನ್ನು ಸುಳ್ಳು ಎಂದು ಪತಿ ನಿರಾಕರಿಸಿದ್ದ.

ತನ್ನ ಪತಿ ಎಸಗಿದ ಗಂಭೀರ ದೈಹಿಕ ಕಿರುಕುಳವನ್ನು ವಿವರಿಸುವ ಪತ್ನಿಯ ವೈದ್ಯಕೀಯ ಪ್ರಮಾಣಪತ್ರವನ್ನು ಪರಿಗಣಿಸಿದ ನ್ಯಾಯಾಲಯ ಒಡಂಬಡಿಕೆ ಬಳಿಕವೂ ಪತಿ ಹಾಗೂ ಆತನ ಕುಟುಂಬ ಸದಸ್ಯರು ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಮುಂದುವರೆಸಿದ್ದರು ಎಂದ ನ್ಯಾಯಾಲಯ “ಕೃತ್ಯ ಕ್ರಿಮಿನಲ್‌ ಸ್ವರೂಪದ್ದಾಗಿದ್ದರೂ ಒಡಂಬಡಿಕೆ ಉಲ್ಲಂಘನೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಿರಿವಂತರು ವಿವಾದ ಇತ್ಯರ್ಥಕ್ಕೆ ಹೇಗೆ ಸಂತ್ರಸ್ತೆಯನ್ನು ಒತ್ತಾಯಿಸಿ ಕಾನೂನು ಉಲ್ಲಂಘನೆಗೆ ಮುಂದಾಗುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದಿತು. ಅಂತೆಯೇ ಪತಿಯ ಅರ್ಜಿಯನ್ನು ಅದು ವಜಾಗೊಳಿಸಿತು.