Delhi Signboard  
ಸುದ್ದಿಗಳು

ದೆಹಲಿ ಚುನಾವಣೆ: ರಾಜಕೀಯ ಪಕ್ಷಗಳ ನಗದು ಯೋಜನೆಗಳನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನಿವೃತ್ತ ನ್ಯಾಯಮೂರ್ತಿ

ಪಕ್ಷಗಳು ಮತದಾರರಿಗೆ ನಗದು ಹಂಚುವುದಾಗಿ ಭರವಸೆ ನೀಡುವುದು ಚುನಾವಣಾ ಭ್ರಷ್ಟಾಚಾರಕ್ಕೆ ಸಮ ಎಂದು ನಿವೃತ್ತ ನ್ಯಾಯಮೂರ್ತಿ ಎಸ್ಎನ್ ಧಿಂಗ್ರಾ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

Bar & Bench

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಮತದಾರರಿಗೆ ನಗದು ಹಂಚುವ ಯೋಜನೆಗಳನ್ನು ಜಾರಿಗೆ ತರುವುದಾಗಿ ರಾಜಕೀಯ ಪಕ್ಷಗಳು ನೀಡಿರುವ ಭರವಸೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠ  ಅರ್ಜಿಯನ್ನು ತುರ್ತಾಗಿ ಆಲಿಸಲು ಸಮ್ಮತಿಸಲಿಲ್ಲ.

ಅರ್ಜಿಯನ್ನು ನಿವೃತ್ತ ನ್ಯಾಯಮೂರ್ತಿ ಎಸ್‌ ಎನ್ ಧಿಂಗ್ರಾ ಸಲ್ಲಿಸಿದ್ದಾರೆ. ರಾಜಕೀಯ ಪಕ್ಷಗಳು ಹೀಗೆ ಚುನಾವಣೆಗೂ ಮುನ್ನ ಮಾಡುವ ಘೋಷಣೆಗಳಿಂದ ಚುನಾವಣಾ ಕಾನೂನುಗಳ ಉಲ್ಲಂಘನೆಯಾಗುವುದಲ್ಲದೆ, ಮತದಾರರ ಮೂಲಭೂತ ಹಕ್ಕುಗಳಿಗೂ ಧಕ್ಕೆ ಒದಗಲಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ತೀವ್ರವಾಗಿ ಅಡ್ಡಿ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ರೂಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಎಎಪಿಯ “ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ”, ಬಿಜೆಪಿಯ “ಮಹಿಳಾ ಸಮೃದ್ಧಿ ಯೋಜನೆ” ಮತ್ತು ಕಾಂಗ್ರೆಸ್‌ನ “ಪ್ಯಾರಿ ದೀದಿ ಯೋಜನೆ”ಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು ಈ ಮೂಲಕ ಪಕ್ಷಗಳು ಅಧಿಕಾರಕ್ಕೆ ಬಂದರೆ ಮತದಾರರಿಗೆ ನಗದು ಲಾಭದ ಭರವಸೆ ನೀಡಿವೆ. ಹೀಗೆ ಮಾಡುವುದು ಪ್ರಜಾಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್‌ 123(1) (ಭ್ರಷ್ಟಾಚಾರ), ಸೆಕ್ಷನ್ 127A (ಅನಧಿಕೃತ ಚುನಾವಣಾ ಸಾಮಗ್ರಿಗಳು), ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 170 ಮತ್ತು 171ರ (ಚುನಾವಣೆ ಅವಧಿಯಲ್ಲಿ ಲಂಚ ಮತ್ತು ಅನಗತ್ಯ ಪ್ರಭಾವದ ಅಪರಾಧಗಳು ಚುನಾವಣೆಗಳು) ಸೆಕ್ಷನ್‌ಗಳನ್ನು ಉಲ್ಲಂಘಿಸಿದಂತೆ ಎಂದು ಅರ್ಜಿ ತಿಳಿಸಿದೆ.

ತಮ್ಮ ಯೋಜನೆಗಳ ಮೂಲಕ, ಪಕ್ಷಗಳು ಮತದಾರರ ಒಪ್ಪಿಗೆ ಪಡೆಯದೆಯೇ ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿ ವೈಯಕ್ತಿಕ ಮತ್ತು ಚುನಾವಣಾ ಮಾಹಿತಿ ಸಂಗ್ರಹಿಸುತ್ತಿವೆ ಎಂದು ಕೂಡ ದೂರಲಾಗಿದೆ.