Delhi High Court 
ಸುದ್ದಿಗಳು

ಹತ್ತು ವರ್ಷಗಳಿಂದ ಜೀವಂತ ಶವವಾಗಿರುವ ವ್ಯಕ್ತಿಯ ದಯಾಮರಣಕ್ಕೆ ದೆಹಲಿ ಹೈಕೋರ್ಟ್ ನಕಾರ

Bar & Bench

ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಜೀವಂತ ಶವದ ಸ್ಥಿತಿಯಲ್ಲಿರುವ ವ್ಯಕ್ತಿಗೆ ದಯಾಮರಣ ನೀಡುವುದಕ್ಕಾಗಿ ವೈದ್ಯಕೀಯ ಮಂಡಳಿ ರಚಿಸುವ ಆದೇಶ ಪ್ರಕಟಿಸಲು ದೆಹಲಿ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ [ಹರೀಶ್‌ ರಾಣಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅರ್ಜಿದಾರ ಅವರು 30 ವರ್ಷದ ಹರೀಶ್ ರಾಣಾ ಅವರನ್ನು ಯಂತ್ರಗಳ ಸಹಾಯದಿಂದ ಸಜೀವವಾಗಿ ಇರಿಸಿಲ್ಲ. ಅವರು ಹೆಚ್ಚುವರಿ ಬಾಹ್ಯ ಸಹಾಯವಿಲ್ಲದೆ ಜೀವಂತ ಇರಲು ಶಕ್ತರು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರು ರಾಣಾ ಅವರಿಗೆ ದಯಾಮರಣ ನಿರಾಕರಿಸಿದರು.

“ಅರ್ಜಿದಾರರು ಇನ್ನೂ ಜೀವಂತ ಇದ್ದು, ರೋಗಿಯನ್ನು ನೋವು ಮತ್ತು ಸಂಕಟದಿಂದ ಮುಕ್ತಗೊಳಿಸು ಉದ್ದೇಶವಿದ್ದರೂ ಮಾರಕ ಔಷಧ ನೀಡಿ ಮತ್ತೊಬ್ಬರ ಸಾವಿಗೆ ಕಾರಣವಾಗಲು ವೈದ್ಯ ಸೇರಿದಂತೆ ಯಾರಿಗೂ ಆಸ್ಪದವಿಲ್ಲ. ನ್ಯಾಯಾಲಯಕ್ಕೆ ವ್ಯಕ್ತಿಯ ಪೋಷಕರ ಬಗ್ಗೆ ಸಹಾನುಭೂತಿ ಇದೆಯಾದರೂ ಅರ್ಜಿದಾರರು ಮಾರಣಾಂತಿಕವಾಗಿ ಅನಾರೋಗ್ಯದಿಂದ ಬಳಲುತ್ತಿಲ್ಲ ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಮತ್ತು ಕಾನೂನುಬದ್ಧವಾಗಿ ಅಸಮರ್ಥನೀಯ ಎನಿಸುವಂತಹ ಮನವಿಯನ್ನು ಪುರಸ್ಕರಿಸಲಾಗದು” ಎಂದು ನುಡಿಯಿತು.

ತನಗೆ ದಯಾಮರಣ ನೀಡುವುದಕ್ಕಾಗಿ ತನ್ನ ಆರೋಗ್ಯ ಸ್ಥಿತಿ ಪರೀಕ್ಷಿಸಲು ವೈದ್ಯಕೀಯ ಮಂಡಳಿ ರಚಿಸಲು ನಿರ್ದೇಶನ ನೀಡುವಂತೆ ಕೋರಿ ರಾಣಾ ಅವರು ತಮ್ಮ ಪೋಷಕರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪಂಜಾಬ್‌ ವಿವಿಯಲ್ಲಿ ಅಧ್ಯಯನ ಮಾಡುತ್ತಿದ್ದ ರಾಣಾ ಅವರು ತಾವಿದ್ದ ಪೇಯಿಂಗ್‌ ಗೆಸ್ಟ್‌ ಹೌಸ್‌ನ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ಈ ಘಟನೆಯಿಂದಾಗಿ ಅವರ ತಲೆಗೆ ಭಾರೀ ಪೆಟ್ಟಾಗಿ ಆಸ್ಪತ್ರೆ ಸೇರಿದ್ದ ಅವರು 2013ರಿಂದಲೂ ಜೀವಂತ ಶವದ ಸ್ಥಿತಿಯಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಮನವಿಯಲ್ಲಿ ಹೇಳಲಾಗಿತ್ತು. ಅಲ್ಲದೆ ಸುದೀರ್ಘ ಅವಧಿಯಿಂದ ಹಾಸಿಗೆ ಹಿಡಿದಿರುವ ಅವರಿಗೆ ಮೈಮೇಲೆ ಹುಣ್ಣುಗಳಾಗಿದ್ದು, ಸೋಂಕು ವ್ಯಾಪಿಸುತ್ತಿದೆ. ಮಗ ಚೇತರಿಸಿಕೊಳ್ಳುವ ಭರವಸೆ ಕಳೆದುಕೊಂಡಿದ್ದು ತಮಗೆ ವಯಸ್ಸಾದ ಕಾರಣ ಮಗನ ಆರೈಕೆ ಸಾಧ್ಯವಾಗುತ್ತಿಲ್ಲ ಎಂದು ರಾಣಾನ ಪೋಷಕರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಿದ್ದರು.

ಕಾಮನ್‌ ಕಾಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾ. ಪ್ರಸಾದ್‌ ಅವರು ಸಕ್ರಿಯ ದಯಾಮರಣಕ್ಕೆ ಅಂದರೆ ಬಾಹ್ಯವಾಗಿ ಔಷಧ ನೀಡಿ ದಯಾಮರಣ ಹೊಂದಲು ಕಾನೂನುಬದ್ಧವಾಗಿ ಅನುಮತಿ ಇಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.