ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಉಲ್ಬಣಿಸಿದ್ದಾಗ ಚಿಕಿತ್ಸೆಗೆಂದು ದೋಷಪೂರಿತ ಉಪಕರಣಗಳನ್ನು ಸಂಗ್ರಹಿಸಿಟ್ಟುಕೊಂಡು ಅಧಿಕ ಬೆಲೆಗೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಟ್ರಿಕ್ಸ್ ಸೆಲ್ಯುಲಾರ್ ಕಂಪೆನಿ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದತಿಗೆ ದೆಹಲಿ ಹೈಕೋರ್ಟ್ ಈಚೆಗೆ ನಿರಾಕರಿಸಿದೆ [ಮ್ಯಾಟ್ರಿಕ್ಸ್ ಸೆಲ್ಯುಲರ್ ಇಂಟರ್‌ನ್ಯಾಶನಲ್ ಸರ್ವಿಸಸ್ ಲಿಮಿಟೆಡ್ ಇನ್ನಿತರರು ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ತನಿಖೆ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ವಿಚಾರಣೆ ರದ್ದುಗೊಳಿಸಲು ನಿರಾಕರಿಸಿದರು.
ಸಾಂಕ್ರಾಮಿಕ ರೋಗ ತೀವ್ರ ಉಲ್ಬಣಗೊಂಡಿದ್ದಾಗ ಅರ್ಜಿದಾರ ಮ್ಯಾಟ್ರಿಕ್ಸ್ ಸೆಲ್ಯುಲಾರ್ ಇಂಟರ್‌ನ್ಯಾಶನಲ್ ಸರ್ವಿಸಸ್ ಲಿಮಿಟೆಡ್ ದೋಷಯುಕ್ತ ಆಮ್ಲಜನಕ ಸಾಂದ್ರಕಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದೆ ಎಂಬ ಆರೋಪದ ಗಹನತೆಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.
ಅಕ್ರಮ ಲಾಭಕ್ಕಾಗಿ ಪರಿಶೀಲಿಸದ ಆಮ್ಲಜನಕ ಸಾಂದ್ರಕಗಳ ಮಾರಾಟ, ಸಾಂಕ್ರಾಮಿಕ ರೋಗದ ಕಾರಣಕ್ಕೆ ಉಂಟಾದ ಆಮ್ಲಜನಕ ಪೂರೈಕೆ ಕೊರತೆಯ ಅನುಚಿತ ಲಾಭ ಮತ್ತು ಅಗತ್ಯವಿರುವ ಜನ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಅವುಗಳನ್ನು ಕೊಳ್ಳಬೇಕೆಂಬ ಅನಿವಾರ್ಯತೆಯನ್ನು ಸೃಷ್ಟಿಸಿದ ಸ್ಥಿತಿಯನ್ನು ನಿರಾಕರಿಸುವಂತಿಲ್ಲ. ಸಾಂಕ್ರಾಮಿಕ ರೋಗ ಹರಡಿದ್ದರಿಂದ ಲಾಭದ ಅಂಶ ಹೆಚ್ಚಿತ್ತು ಎಂದು ಅದು ಹೇಳಿದೆ.
ಅಲ್ಲದೆ ಕೋವಿಡ್ ರೋಗಿಗಳಿಗೆ ಸಹಾಯಕವಾಗಲೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದ ಅಗತ್ಯ ಮಾನದಂಡಗಳಿಗೆ ಅನುಗುಣವಾಗಿ ಅರ್ಜಿದಾರ ಕಂಪೆನಿ ಮಾರಾಟ ಮಾಡಿದ ಆಮ್ಲಜನಕ ಸಾಂದ್ರಕಗಳು ಇರಲಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯ ವಿವಿಧ ಸ್ಥಳಗಳಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆಮ್ಲಜನಕದ ತೀವ್ರ ಕೊರತೆ ಇದ್ದರೂ ಆಮ್ಲಜನಕ ಸಿಲಿಂಡರ್‌ಗಳು, ಸಾಂದ್ರಕಗಳು, ಕೆಎನ್- 95 ಮುಖಗವಸುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುರುವುದು ಆಗ ಪತ್ತೆಯಾಗಿತ್ತು. ವಂಚನೆ ಮತ್ತು ನಿರ್ಲಕ್ಷ್ಯದಿಂದ ಮಾರಕ ರೋಗ ಹರಡಿದ ಅಪರಾಧಕ್ಕಾಗಿ ಕಾಳ ದಂಧೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಅರ್ಜಿದಾರ ಕಂಪೆನಿ ಪರ ವಕೀಲರು ವಾದ ಮಂಡಿಸಿ ವಂಚನೆ ನಡೆದಿಲ್ಲ ಎಂದರು. ಆದರೆ ವಾದ ಒಪ್ಪದ ನ್ಯಾಯಾಲಯ, ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ರದ್ದುಗೊಳಿಸಬಹುದು. ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಇದೆ ಎಂದಿತು.