ದುಬಾರಿ ಬೆಲೆಗೆ ಆಮ್ಲಜನಕ ಸಾಂದ್ರಕ ಮಾರಾಟ: ಮ್ಯಾಟ್ರಿಕ್ಸ್‌ ಸೆಲ್ಯುಲರ್‌ ಉದ್ಯೋಗಿಗಳಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು

ಸಾಕೇತ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅನಿಲ್‌ ಕುಮಾರ್‌ ಗಾರ್ಗ್‌ ಅವರು ಆದೇಶ ಹೊರಡಿಸಿದ್ದಾರೆ.
Maxtrix Cellular
Maxtrix Cellular
Published on

ಮ್ಯಾಟ್ರಿಕ್ಸ್‌ ಸೆಲ್ಯುಲರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್‌ ಖನ್ನಾ ಮತ್ತು ಉಪಾಧ್ಯಕ್ಷ ಗೌರವ್‌ ಸೂರಿ ಹಾಗೂ ಇತರೆ ಇಬ್ಬರಿಗೆ ದೆಹಲಿ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ. ದೆಹಲಿ ಪೊಲೀಸರು ಇತ್ತೀಚೆಗೆ ಲೋಧಿ ಕಾಲೋನಿ ಮತ್ತು ಮೆಹ್ರೌಲಿಗಳಲ್ಲಿ ದಾಳಿ ಮಾಡಿ ಮ್ಯಾಟ್ರಿಕ್ಸ್‌ ಸೆಲ್ಯುಲರ್ ಸಂಸ್ಥೆಯು ಮಾರಾಟಕ್ಕೆ ಸಂಗ್ರಹಿಸಿದ್ದ ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌) ಜಪ್ತಿ ಮಾಡುವುದರ ಜೊತೆಗೆ ಗೌರವ್ ಸೂರಿ, ಗೌರವ್‌ ಖನ್ನಾ ಹಾಗೂ ಇತರ ಉದ್ಯೋಗಿಗಳನ್ನು ಬಂಧಿಸಿತ್ತು.

ಆರೋಪಿಗಳಿಂದ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತೆಯನ್ನು ಪಡೆದು ಸಾಕೇತ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅನಿಲ್‌ ಕುಮಾರ್‌ ಗಾರ್ಗ್‌ ಅವರು ಜಾಮೀನು ಮಂಜೂರು ಮಾಡಿದ್ದಾರೆ.

Also Read
[ಆಮ್ಲಜನಕ ಸಾಂದ್ರಕ ಮುಟ್ಟುಗೋಲು] ವ್ಯಾಪಾರ ಮಾಡುವುದು ಅಪರಾಧವೇ? ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಆರೋಪಿ ಹಿತೇಶ್‌ ಜಾಮೀನು ಮನವಿಗೆ ಸಂಬಂಧಿಸಿದ ಆದೇಶವನ್ನು ನಾಳೆ ಪ್ರಕಟಿಸಲಾಗುತ್ತದೆ. ದಾಳಿಯ ಬೆನ್ನ ಹಿಂದೆಯೇ ಐವರು ಆರೋಪಿಗಳನ್ನು ಪೊಲೀಸರು ವಾರದ ಹಿಂದೆ ವಶಕ್ಕೆ ಪಡೆದಿದ್ದರು. ಆರೋಪಿಗಳ ವಿರುದ್ಧ ಸಾಂಕ್ರಾಮಿಕ ಕಾಯಿದೆಯ ಸೆಕ್ಷನ್‌ 3 ಹಾಗೂ ಅಗತ್ಯ ವಸ್ತುಗಳ ಕಾಯಿದೆಯ ಸೆಕ್ಷನ್‌ 7ರ ಅಡಿಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಆರೋಪಿಗಳೆಲ್ಲರೂ ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ನಂಬಿಸಿ, “ಸಂಚು ರೂಪಿಸಿ” ಆಮದು ಮಾಡಿಕೊಂಡಿರುವ ಆಮ್ಲಜನಕ ಸಾಂದ್ರಕಗಳನ್ನು “ದುಬಾರಿ ಬೆಲೆ”ಗೆ ಮಾರುತ್ತಿದ್ದಾರೆ ಎನ್ನುವುದು ಪ್ರಾಸಿಕ್ಯೂಷನ್‌ ವಾದವಾಗಿತ್ತು.

ಆದರೆ, ಈ ಕುರಿತು ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, ಎಲ್ಲ ಸಾಂದ್ರಕಗಳನ್ನೂ ಸೂಕ್ತ ಕಸ್ಟಮ್‌ ತೆರಿಗೆ ಪಾವತಿಸುವ ಮೂಲಕವೇ ಅಮದು ಮಾಡಿಕೊಳ್ಳಲಾಗಿದೆ. ಮಾರಾಟವನ್ನು ಮೊಬೈಲ್‌ ಅಪ್ಲಿಕೇಷನ್ ಮೂಲಕ ಮಾಡಲಾಗಿದೆ. ಎಲ್ಲವನ್ನೂ ಇನ್ವಾಯ್ಸ್‌ಗಳ‌ (ಬೆಲೆಪಟ್ಟಿ) ಮುಖಾಂತರವೇ ಮಾರಾಟ ಮಾಡಿದ್ದು, ಜಿಎಸ್‌ಟಿ ಹಾಕಲಾಗಿದೆ ಎನ್ನುವ ಅರ್ಜಿದಾರರ ವಾದವನ್ನು ಪ್ರಾಸಿಕ್ಯೂಷನ್‌ಗೆ ಅಲ್ಲಗೆಳೆಯಲಾಗಿಲ್ಲ ಎಂದು ನಿನ್ನೆಯ ವಿಚಾರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತ್ತು. ‌

Kannada Bar & Bench
kannada.barandbench.com