ಫ್ಯೂಚರ್ ರಿಟೇಲ್‌ಗೆ ಹಿನ್ನಡೆಯಾಗುವಂಥ ಬೆಳೆವಣಿಗೆಯೊಂದು ನಡೆದಿದೆ. ಕಿಶೋರ್ ಬಿಯಾನಿ ಒಡೆತನದ ಫ್ಯೂಚರ್ ಗ್ರೂಪ್ ಮತ್ತು ರಿಲಯನ್ಸ್ ರಿಟೇಲ್ಸ್ ನಡುವಣ ವ್ಯವಹಾರದಲ್ಲಿ ಶಾಸನಬದ್ಧ ಸಂಸ್ಥೆಯ ಜೊತೆಗೆ ಪತ್ರ ವ್ಯವಹಾರ ನಡೆಸಿ ಅಮೆಜಾನ್ ಮಧ್ಯಪ್ರವೇಶಿಸುವುದನ್ನು ತಡೆಯಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. (ಫ್ಯೂಚರ್ ರಿಟೇಲ್ ವರ್ಸಸ್ ಅಮೆಜಾನ್).
ರಿಲಯನ್ಸ್ ರಿಟೇಲ್ ಜೊತೆ ಯಾವುದೇ ತೆರನಾದ ವ್ಯವಹಾರ ನಡೆಸದಂತೆ ಫ್ಯೂಚರ್ ಸಮೂಹವನ್ನು ನಿಯಂತ್ರಿಸಿ ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವು (ಎಸ್‌ಐಎಸಿ) ತುರ್ತು ನ್ಯಾಯ ತೀರ್ಮಾನ ಮಾಡಿದ್ದ ಕುರಿತು ಫ್ಯೂಚರ್ ರಿಟೇಲ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಕಾನೂನಿನ ಪ್ರಕಾರ ಶಾಸನಬದ್ಧ ಸಂಸ್ಥೆಗಳು ತಮ್ಮದೇ ಅಭಿಪ್ರಾಯ ಹೊಂದಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ. ಫ್ಯೂಚರ್ ರಿಟೇಲ್ ಮೊಕದ್ದಮೆಯು ಸಮರ್ಥನೀಯವಾಗಿದ್ದು, ತುರ್ತು ಆದೇಶವೂ ಸರಿಯಾಗಿದೆ. ರಿಲಯನ್ಸ್ ಒಂದಿಗಿನ ವ್ಯವಹಾರಕ್ಕೆ ಒಪ್ಪಿಗೆ ನೀಡುವ ನಿಲುವಳಿಯು ಮೇಲ್ನೋಟಕ್ಕೆ ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಜೊತೆ ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತ್ತು. ಫ್ಯೂಚರ್ ಕೂಪನ್ಸ್ ಪ್ರೈ. ಲಿಮಿಟೆಡ್‌ನಲ್ಲಿ ಅಮೆಜಾನ್ ಪಾಲು ಹೊಂದಿದ್ದು, ಎಫ್‌ಆರ್‌ಎಲ್‌ನಲ್ಲಿ ಶೇ. 9.82ರಷ್ಟು ಷೇರುದಾರರಾಗಿದ್ದಾರೆ. ಮುಕೇಶ್ ಧೀರೂಬಾಯಿ ಅಂಬಾನಿ ಸಮೂಹದ ಕಂಪೆನಿಗಳು ನಕಾರಾತ್ಮಕ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವುದರಿಂದ ಫ್ಯೂಚರ್ ಸಮೂಹದ ಜೊತೆ ವ್ಯವಹಾರ ನಡೆಸಲಾಗದು ಎಂಬ ಆಧಾರದಲ್ಲಿ ರಿಟೇಲ್ ದೈತ್ಯ ಸಂಸ್ಥೆಯಾದ ಫ್ಯೂಚರ್ ರಿಟೇಲ್ಸ್ ನ್ಯಾಯ ನಿರ್ಣಯದ ಮೊರೆ ಹೋಗಿತ್ತು. ತುರ್ತು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕೆ ಬದಲಾಗಿ ಒಪ್ಪಂದವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಸೆಬಿಯಂಥ ಶಾಸನಬದ್ಧ ಪ್ರಾಧಿಕಾರಕ್ಕೆ ಪತ್ರ ಬರೆಯುವುದರಿಂದ ಅಮೆಜಾನ್‌ನ್ನು ತಡೆಯುವಂತೆ ಎಫ್‌ಆರ್‌ಎಲ್ ಕೋರಿತ್ತು.
ಹಿರಿಯ ನ್ಯಾಯವಾದಿಗಳಾದ ಹರೀಶ್ ಸಾಳ್ವೆ ಮತ್ತು ದಾರಿಯಸ್ ಖಂಬಾಟ ಅವರು ಫ್ಯೂಚರ್ ರಿಟೇಲ್ ಪ್ರತಿನಿಧಿಸಿದ್ದರು. ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ರಿಲಯನ್ಸ್ ಪರ , ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯಂ, ರಾಜೀವ್ ನಾಯರ್, ಅಮಿತ್ ಸಿಬಲ್ ಮತ್ತು ಗೌರವ್ ಬ್ಯಾನರ್ಜಿ ಅಮೆಜಾನ್ ಸಂಸ್ಥೆಯನ್ನು ಪ್ರತಿನಿಧಿಸಿದ್ದರು.