AAP 
ಸುದ್ದಿಗಳು

ಎಎಪಿ ಮಾನ್ಯತೆ ರದ್ದತಿ ಕೋರಿಕೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್; ಸುಪ್ರೀಂ ಸಂಪರ್ಕಿಸಲು ಅನುಮತಿ

ರಾಜಕೀಯ ಪಕ್ಷದ ಮಾನ್ಯತೆ ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಪೀಠ ಹೇಳಿದೆ.

Bar & Bench

ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿ ಎಂದು ಬಹಿರಂಗಪಡಿಸದೇ ಇರುವುದರಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸದಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ರಾಜಕೀಯ ಪಕ್ಷದ ಮಾನ್ಯತೆ ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಹೇಳಿದೆ.

"ಪಕ್ಷಗಳ ಮನ್ನಣೆ ರದ್ದುಗೊಳಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡದಿರಲು ಉತ್ತಮ ಕಾರಣವಿರಬಹುದು. ನೀವು ಪ್ರಶ್ನಿಸದ ಹೊರತು ಅದನ್ನು ಪರಿಶೀಲಿಸಲು ಹೋಗುವುದಿಲ್ಲ. ನೀವು ಚುನಾವಣಾ ಆಯೋಗದ ಮಾನ್ಯತೆ ರದ್ದುಗೊಳಿಸುವ ಅಧಿಕಾರವನ್ನು ಪ್ರಶ್ನಿಸುತ್ತಿಲ್ಲ. ನೀವು ನಮಗೆ ಒಂದು ಪಕ್ಷದ ಮಾನ್ಯತೆ ರದ್ದುಗೊಳಿಸಲು ಹೇಳುತ್ತಿದ್ದೀರಿ. ಇದಕ್ಕೆ ಅನುಮತಿ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ನಂತರ ಅರ್ಜಿದಾರರಾದ ಅಶ್ವನಿ ಮುದ್ಗಲ್ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಹಿಂಪಡೆಯಲು ಅನುಮತಿ ಕೋರಿದರು. ಅಗ ನ್ಯಾಯಾಲಯ "ಅರ್ಜಿಯನ್ನು ಹಿಂಪಡೆಯಲು ಅನುಮತಿಸುವುದರೊಂದಿಗೆ ವಜಾಗೊಳಿಸಲಾಗಿದ್ದು, ಸುಪ್ರೀಂ ಕೋರ್ಟ್‌ ಸಂಪರ್ಕಿಸಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ," ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಎಎಪಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು ಅದು ಮದ್ಯ ಹಗರಣದಲ್ಲಿ ಆರೋಪಿಯಾಗಿದೆ. ಆದರೆ, ಈ ಕುರಿತ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಆದೇಶದ ಹೊರತಾಗಿಯೂ ಬಹಿರಂಗಗೊಳಿಸದೆ ಆಮ್‌ ಆದ್ಮಿ ಪಕ್ಷವು ದೆಹಲಿ ವಿಧಾನಸಭಾ ಚುನಾವಣೆ- 2025ರ ಮಾದರಿ ನೀತಿ ಸಂಹಿತೆಯನ್ನು ಪಕ್ಷ ಉಲ್ಲಂಘಿಸಿದೆ ಎಂದು ಆಕ್ಷೇಪಿಸಿ ಶ್ರೀ ಸನಾತನ ಧರ್ಮ ಮಂದಿರ ಟ್ರಸ್ಟ್‌ನ ಹಿರಿಯ ಉಪಾಧ್ಯಕ್ಷರಾಗಿರುವ ಅರ್ಜಿದಾರರು ದೂರಿದ್ದರು.

ಸಂವಿಧಾನದ ಪ್ರಕಾರ, ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಬಗೆಗಿನ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ತನಗೆ ಮತ್ತು ಸಾರ್ವಜನಿಕರಿಗೆ ಇದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.