Facebook, Whatsapp and Delhi High Court
Facebook, Whatsapp and Delhi High Court 
ಸುದ್ದಿಗಳು

ವಾಟ್ಸಾಪ್‌ ಗೋಪ್ಯತಾ ನೀತಿಯ ಕುರಿತಾದ ಸಿಸಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

Bar & Bench

ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನ ಕಳೆದ ವರ್ಷ ಜಾರಿಗೆ ತಂದ ನೂತನ ಗೋಪ್ಯತಾ ನೀತಿಗಳ ಕುರಿತ ಭಾರತೀಯ ಸ್ಪರ್ಧಾ ಆಯೋಗದ ತನಿಖೆಗೆ ತಡೆ ನೀಡಲು ದೆಹಲಿ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ಕಳೆದ ವರ್ಷ ಇದೇ ವಿಚಾರವಾಗಿ ಏಕಸದಸ್ಯ ಪೀಠವು ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾ. ಸುಬ್ರಮೊಣಿಯಮ್‌ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ವಾಟ್ಸಾಪ್‌ ಮತ್ತು ಅದರ ಮಾತೃಸಂಸ್ಥೆ ಫೇಸ್‌ಬುಕ್‌ ಸಲ್ಲಿಸಿದ್ದ ಮನವಿಗಳನ್ನು ವಜಾಗೊಳಿಸಿತು.

ಏಕಸದಸ್ಯ ಪೀಠದ ತೀರ್ಪು ಅತ್ಯಂತ ವಿವೇಚನಾಯುಕ್ತವಾಗಿದ್ದು, ಮನವಿಗಳು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.

ವಾಟ್ಸಾಪ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆಯವರು, ತಾವು ತನಿಖೆಯನ್ನು ವಿರೋಧಿಸುತ್ತಿಲ್ಲ ಆದರೆ ತನಿಖೆಯನ್ನು ನಡೆಸುವ ಸಿಸಿಐನ ನ್ಯಾಯಿಕ ವ್ಯಾಪ್ತಿಯ ಬಗ್ಗೆ ಆಕ್ಷೇಪಣೆ ಎತ್ತುತ್ತಿರುವುದಾಗಿ ವಿವರಿಸಿದ್ದರು. ಯಾವ ಗೋಪ್ಯತಾ ನೀತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೋ ಅದನ್ನು ತಡೆಹಿಡಿಯಲಾಗಿದೆ. ಕೇಂದ್ರವು ಮಾಹಿತಿ ರಕ್ಷಣಾ ಮಸೂದೆಯನ್ನು ರೂಪಿಸುತ್ತಿರುವುದು ಇದಕ್ಕೆ ಕಾರಣ. ಹಾಗಾಗಿ ಪ್ರಕರಣಕ್ಕೆ ಕಾರಣವಾದ ಸಂಗತಿಯೇ ಇಲ್ಲವಾಗಿದೆ ಎಂದಿದ್ದರು.

"ಕೇಂದ್ರವು ಅನುಮತಿಸಿದರೆ ನಾವು ನೂತನ ಗೋಪ್ಯತಾ ನೀತಿಯನ್ನು ಹೊಂದುತ್ತೇವೆ. ಇಲ್ಲವಾದರೆ ಇಲ್ಲ," ಎಂದು ಹೇಳಿದ್ದರು.