ಮಾಹಿತಿ ರಕ್ಷಣಾ ಮಸೂದೆ ಜಾರಿಯಾಗುವವರೆಗೆ‌ ಗೋಪ್ಯತಾ ನೀತಿ ತಡೆಹಿಡಿಯಲಿರುವ ವಾಟ್ಸಪ್‌; ದೆಹಲಿ ಹೈಕೋರ್ಟ್‌ಗೆ ಮಾಹಿತಿ

“ಸರ್ಕಾರವು ಗೋಪ್ಯತಾ ನೀತಿಯನ್ನು ರದ್ದುಪಡಿಸಲು ಕೇಳಿದೆ. ಅದರೆ, ನಾವು ಮಾಹಿತಿ ರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ ನೀತಿಯನ್ನು ಜಾರಿಮಾಡುವುದಿಲ್ಲವೆಂದು ತಿಳಿಸಿದ್ದೇವೆ,” ಎಂದ ಹಿರಿಯ ವಕೀಲ ಹರೀಶ್‌ ಸಾಳ್ವೆ.
WhatsApp, Delhi High Court
WhatsApp, Delhi High Court
Published on

ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ವೈಯಕ್ತಿಕ ಮಾಹಿತಿ ರಕ್ಷಣಾ ಮೂಸೂದೆ - 2019 ಜಾರಿಗೆ ಬರುವವರೆಗೆ ವಿವಾದಕ್ಕೆ ಕಾರಣವಾಗಿರು ವಾಟ್ಸಪ್‌ ಗೋಪ್ಯತಾ ನೀತಿಯನ್ನು ತಡೆ ಹಿಡಿಯುವುದಾಗಿ ದೆಹಲಿ ಹೈಕೋರ್ಟ್‌ಗೆ ವಾಟ್ಸಪ್‌‌ ತಿಳಿಸಿದೆ (ವಾಟ್ಸಪ್‌ ಎಲ್‌ಎಲ್‌ಸಿ ವರ್ಸಸ್ ಭಾರತೀಯ‌ ಸ್ಪರ್ಧಾ ಆಯೋಗ).

ಈ ಕುರಿತು ವಾಟ್ಸಪ್‌ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾ. ಜ್ಯೋತಿ ಸಿಂಗ್‌ ಅವರ ಪೀಠಕ್ಕೆ ಶುಕ್ರವಾರ ಮಾಹಿತಿ ನೀಡಿದ್ದಾರೆ.

“ಸರ್ಕಾರವು ನಮಗೆ ಗೋಪ್ಯತಾ ನೀತಿಯನ್ನು ರದ್ದುಪಡಿಸಲು ಕೇಳಿತು. ಆದರೆ, ನಾವು ಮಾಹಿತಿ ರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ ನೀತಿಯನ್ನು ಜಾರಿಗೊಳಿಸುವುದಿಲ್ಲವೆಂದು ತಿಳಿಸಿದ್ದೇವೆ. ಮಸೂದೆ ಯಾವಾಗ ಜಾರಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ… ಕೆಲ ಸಮಯದವರೆಗೆ ನಾವು ಇದನ್ನು ಜಾರಿಮಾಡುವುದಿಲ್ಲ ಎಂದು ಹೇಳಿದ್ದೇವೆ. ಒಂದು ವೇಳೆ ಮಸೂದೆಯು ನೀತಿಯನ್ನು ಜಾರಿಗೊಳಿಸಲು ನಮಗೆ ಅನುವು ಮಾಡಿದರೆ, ಆಗ ಸಂಪೂರ್ಣ ಬೇರೆಯದೇ ಆದ ಪರಿಣಾಮಗಳು ಉಂಟಾಗಲಿವೆ,” ಎಂದು ಸಾಳ್ವೆ ಹೇಳಿದರು.

ವಾಟ್ಸಪ್‌ ಗೋಪ್ಯತಾ ನೀತಿಯು ಮಾಹಿತಿ ತಂತ್ರಜ್ಞಾನ (ಭದ್ರತಾ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳು ಹಾಗೂ ಸೂಕ್ಷ್ಮ ವೈಯಕ್ತಿಕ ಮಾಹಿತಿ ಅಥವಾ ದತ್ತಾಂಶ) ನಿಯಮಗಳು - 2011ರ ಉಲ್ಲಂಘನೆಯಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಪ್‌ಗೆ ನೋಟಿಸ್ ನೀಡಿತ್ತು. ಅದಕ್ಕೆ ನಾವು ಪ್ರತಿಕ್ರಿಯಿಸಿದ್ದು, ಕೆಲಕಾಲದವರೆಗೆ ವಾಟ್ಸಾಪ್‌ನ ಕಾರ್ಯಾನುಗುಣವನ್ನು ಸೀಮಿತಗೊಳಿಸದಿರಲು ತೀರ್ಮಾನಿಸಿದ್ದು ಬಳಕೆದಾರರಿಗೆ ಅಪ್‌ಡೇಟೆಡ್‌ ಆವೃತ್ತಿಯನ್ನು ತೋರಿಸುವುದಾಗಿ ಹೇಳಿದ್ದೇವೆ. ನಾವು ಈ ವಿಧಾನವನ್ನು ಮಾಹಿತಿ ರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ ಮುಂದುವರೆಸಲಿದ್ದೇವೆ. ಸ್ವಯಂ ಪ್ರೇರಿತವಾಗಿ ಅಲ್ಲಿಯವರೆಗೆ ಅಪ್‌ಡೇಟ್‌ಅನ್ನು ತಡೆಹಿಡಿಯಲು ತೀರ್ಮಾನಿಸಿದ್ದೇವೆ,” ಎಂದು ವಿವರಿಸಿದರು.

ವಿಚಾರಣೆಯ ವೇಳೆ ನ್ಯಾಯಾಲಯವು, ವಾಟ್ಸಾಪ್‌ ಯೂರೋಪ್‌ ಹಾಗೂ ಭಾರತಕ್ಕೆ ಪ್ರತ್ಯೇಕವಾಗಿರುವ ನೀತಿಗಳನ್ನು ಹೊಂದಿದೆಯೇ ಎಂದು ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಾಳ್ವೆ, “ಸಂಸತ್ತಿನ ಕಾಯಿದೆ ಬರುವವರೆಗೆ ನಾವು ಏನನ್ನೂ ಮಾಡಲು ಮುಂದಾಗುವುದಿಲ್ಲ. ಇದು ನಮ್ಮ ವಚನವಾಗಿದೆ. ಸಂಸತ್ತು ಒಂದೊಮ್ಮೆ ಭಾರತಕ್ಕೆ ಪ್ರತ್ಯೇಕ ನೀತಿಯನ್ನು ಹೊಂದಲು ನಮಗೆ ಅನುವು ಮಾಡಿದರೆ ನಾವು ಹೊಂದುತ್ತೇನೆ. ಇಲ್ಲವಾದರೆ, ನಂತರ ನಿರ್ಧರಿಸುತ್ತೇವೆ,” ಎಂದರು.

Kannada Bar & Bench
kannada.barandbench.com