ಒಮರ್ ಅಬ್ದುಲ್ಲಾ ಫೇಸ್ ಬುಕ್
ಸುದ್ದಿಗಳು

ವಿಚ್ಛೇದನ: ಒಮರ್ ಅಬ್ದುಲ್ಲಾ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಈ ಹಿಂದೆ ಅಬ್ದುಲ್ಲಾ ಅವರ ಮನವಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಸಂಜೀವ್ ಸಚದೇವ್‌ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

Bar & Bench

ತಮ್ಮ ಪರಿತ್ಯಕ್ತ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ಕೋರಿ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಈ ಹಿಂದೆ ಅಬ್ದುಲ್ಲಾ ಅವರ ಮನವಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಸಂಜೀವ್ ಸಚದೇವ್‌ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ನ್ಯೂನತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಪಾಯಲ್ ವಿರುದ್ಧ ಒಮರ್ ಅಬ್ದುಲ್ಲಾ ಮಾಡಿರುವ ಕ್ರೌರ್ಯದ ಆರೋಪಗಳು ಅಸ್ಪಷ್ಟವಾಗಿವೆ ಎಂಬ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಅದು ಒಪ್ಪಿಕೊಂಡಿದೆ.

"ಕ್ರೌರ್ಯದ ಆರೋಪಗಳು ಅಸ್ಪಷ್ಟ ಮತ್ತು ಸ್ವೀಕಾರಾರ್ಹವಲ್ಲ ಮತ್ತು ದೈಹಿಕ ಅಥವಾ ಮಾನಸಿಕ ಕ್ರೌರ್ಯ ಎಂದು ಕರೆಯಬಹುದಾದ ಯಾವುದೇ ಕೃತ್ಯವನ್ನು ಸಾಬೀತುಪಡಿಸಲು ಮೇಲ್ಮನವಿದಾರ ವಿಫಲರಾಗಿದ್ದಾರೆ ಎಂಬ ಕುಟುಂಬ ನ್ಯಾಯಾಲಯದ ದೃಷ್ಟಿಕೋನದಲ್ಲಿ ಯಾವುದೇ ದೌರ್ಬಲ್ಯ ಕಂಡುಬರುತ್ತಿಲ್ಲ. ಪರಿಣಾಮ ಮನವಿಯಲ್ಲಿ ಯಾವುದೇ ಹುರುಳು ಕಂಡುಬರದೇ ಇರುವುದರಿಂದ ಅದನ್ನು ವಜಾಗೊಳಿಸಲಾಗಿದೆೆ" ಎಂದು ವಿಭಾಗೀಯ ಪೀಠ ಹೇಳಿದೆ. ಆದೇಶದ ಮತ್ತಷ್ಟು ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

ಸೆಪ್ಟೆಂಬರ್ 1994 ರಲ್ಲಿ ವಿವಾಹವಾದ ಒಮರ್ ಮತ್ತು ಪಾಯಲ್ ಅಬ್ದುಲ್ಲಾ ದೀರ್ಘಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಅಬ್ದುಲ್ಲಾ ಅವರ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಆಗಸ್ಟ್ 30, 2016ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅಬ್ದುಲ್ಲಾ ಹೈಕೋರ್ಟ್ ಮೊರೆ ಹೋಗಿದ್ದರು.

ಪಾಯಲ್ ಅಬ್ದುಲ್ಲಾಗೆ ಒಮರ್ ಪಾವತಿಸಬೇಕಿದ್ದ ಜೀವನಾಂಶದ ಮೊತ್ತವನ್ನು ಹೈಕೋರ್ಟ್ ಇತ್ತೀಚೆಗೆ ಹೆಚ್ಚಿಸಿತ್ತು. ಪಾಯಲ್‌ ಅವರಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹1.5 ಲಕ್ಷ, ಇಬ್ಬರು ಪುತ್ರರ ವಿದ್ಯಾಭ್ಯಾಸಕ್ಕಾಗಿ ತಲಾ ₹60,000 ರೂ.ಗಳನ್ನು ನೀಡುವಂತೆ ಸೂಚಿಸಲಾಗಿತ್ತು.

ವಿಚಾರಣಾ ನ್ಯಾಯಾಲಯವು ಪಾಯಲ್ ಅಬ್ದುಲ್ಲಾಗೆ ತಿಂಗಳಿಗೆ ₹ 75,000 ಮತ್ತು ಅವರ ಮಗನಿಗೆ 18 ವರ್ಷ ತುಂಬುವವರೆಗೆ ₹ 25,000 ಮಧ್ಯಂತರ ಜೀವನಾಂಶವನ್ನು ನೀಡಿತ್ತು.