ಇತ್ತೀಚೆಗೆ ಉಂಟಾದ ದುರ್ಘಟನೆಗಳ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯ ಎಲ್ಲಾ ಹಾರಾಟ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ತಾನು ವಿಮಾನ ಯಾನ ಸಂಸ್ಥೆಗಳನ್ನು ನಡೆಸಲು ಅಥವಾ ಯಾವ ವಿಮಾನ ಟೇಕಾಫ್ ಆಗಬೇಕು ಇಲ್ಲವೇ ಆಗಬಾರದು ಎಂಬ ಬಗ್ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
“ಇದು ನಮ್ಮ ಕ್ಷೇತ್ರ ಅಲ್ಲ. ನಾವು ಕಾನೂನಿನ ಚೌಕಟ್ಟಿನೊಳಗೆ ಆದೇಶ ರವಾನಿಸಬೇಕಾಗುತ್ತದೆ" ಎಂದು ಅರ್ಜಿದಾರರಿಗೆ ನ್ಯಾಯಾಲಯ ಹೇಳಿತು. ರಾಹುಲ್ ಭಾರದ್ವಾಜ್ ಎಂಬ ವಕೀಲರು ತಮ್ಮ ಪುತ್ರ ಯುಗನ್ ಭಾರದ್ವಾಜ್ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದರು.
ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿರುವ ಸ್ಪೈಸ್‌ಜೆಟ್ ಸರಣಿ ಅಪಘಾತಗಳಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿದೆ. ಸಂಸ್ಥೆಯ ದೆಹಲಿ- ದುಬೈ ವಿಮಾನ ತಾಂತ್ರಿಕದೋಷದಿಂದಾಗಿ ಕರಾಚಿಯಲ್ಲಿ ಇಳಿದರೆ ಮತ್ತೊಂದು ವಿಮಾನದ ವಿಂಡ್‌ಶೀಲ್ಡ್ ಒಡೆದಿತ್ತು. ಪಾಟ್ನಾದಿಂದ ಹಾರಾಟ ಆರಂಭಿಸಿದ್ದ ಬೇರೊಂದು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಹಕ್ಕಿಯೊಂದು ಬಡಿದು ಅವಘಡ ಸಂಭವಿಸಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು.