Delhi High Court, Marital Rape

 
ಸುದ್ದಿಗಳು

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿದ್ದ ಮನವಿ: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ರಾಜ್ಯ ಸರ್ಕಾರಗಳು ಮತ್ತು ಇತರ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರವಷ್ಟೇ ಕೇಂದ್ರ ನಿಲುವು ತೆಗೆದುಕೊಳ್ಳಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

Bar & Bench

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ತನ್ನ ತೀರ್ಪು ಕಾಯ್ದಿರಿಸಿತು [ಆರ್‌ಐಟಿ ಪ್ರತಿಷ್ಠಾನ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ಸಿ ಹರಿ ಶಂಕರ್ ಅವರಿದ್ದ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ರಾಜ್ಯ ಸರ್ಕಾರಗಳು ಮತ್ತು ಇತರ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರವಷ್ಟೇ ಕೇಂದ್ರ ನಿಲುವು ತೆಗೆದುಕೊಳ್ಳಬಹುದು ಎಂದು ಇಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಈ ಪ್ರಕರಣವು ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರಬಹುದಾದ್ದರಿಂದ, ಸಮಾಲೋಚನಾ ಪ್ರಕ್ರಿಯೆಯ ನಂತರವೇ ಕೇಂದ್ರ ತನ್ನ ನಿಲುವು ಪ್ರಕಟಿಸಲಿದೆ ಎಂದು ಅವರು ಒತ್ತಿ ಹೇಳಿದರು. ಹೀಗಾಗಿ ಎಲ್ಲಾ ಭಾಗೀದಾರರ ಅಭಿಪ್ರಾಯಗಳನ್ನು ಸ್ವೀಕರಿಸುವವರೆಗೆ ಪ್ರಕರಣ ಮುಂದೂಡುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.

ಆದರೆ, ಕಾಲಮಿತಿ ಇರುವುದರಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ವಿನಾಯತಿ ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಈ ಕುರಿತು ನ್ಯಾಯಾಂಗದ ನಿರ್ಧಾರವೇ ಅಂತಿಮವಲ್ಲ, ಎಜಿ ಅಥವಾ ಶಾಸನ ರೂಪಿಸುವವರು ಕೂಡ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ಅದು ಹೇಳಿತು.

ಎಲ್ಲಾ ಪಕ್ಷಕಾರರ ಪರ ವಕೀಲರು ತಮ್ಮ ವಾದ ಮಂಡಿಸಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡ ನ್ಯಾಯಾಲಯ ನಿರ್ದೇಶನ ನೀಡುವುದಕ್ಕಾಗಿ ಪ್ರಕರಣವನ್ನು ಮಾರ್ಚ್ 2ಕ್ಕೆ ಪಟ್ಟಿ ಮಾಡಿತು. ಎಲ್ಲಾ ವಕೀಲರು ತಮ್ಮ ವಾದ ಸಾರಾಂಶವನ್ನು ಸಲ್ಲಿಸುವಂತೆ ಅದು ಸೂಚಿಸಿತು. ಪತ್ನಿಯ ಜೊತೆ ಸಮ್ಮತಿ ರಹಿತವಾಗಿ ಲೈಂಗಿಕ ಸಂಬಂಧ ಹೊಂದಿದ್ದರೂ ಪತಿಗೆ ಅತ್ಯಾಚಾರದಿಂದ ವಿನಾಯಿತಿ ಕಲ್ಪಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 375ರ ವಿನಾಯಿತಿ 2 ಅನ್ನು ಅರ್ಜಿಗಳು ಪ್ರಶ್ನಿಸಿವೆ.