Arvind Kejriwal and Tihar Jail 
ಸುದ್ದಿಗಳು

ಜೈಲಿನಲ್ಲಿ ವಕೀಲರ ಜೊತೆ ಹೆಚ್ಚು ಸಭೆಗಳನ್ನು ನಡೆಸಲು ಕೇಜ್ರಿವಾಲ್‌ ಕೋರಿಕೆ: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

Bar & Bench

ಜೈಲಿನಲ್ಲಿ ತಮ್ಮ ಕಾನೂನು ತಂಡದೊಂದಿಗೆ ಹೆಚ್ಚು ಸಭೆಗಳನ್ನು ನಡೆಸಲು ಅವಕಾಶ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದೆಹಲಿ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.

ದೆಹಲಿ ಅಬಕಾರಿ ನೀತಿ ಸುತ್ತಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿಕೊಂಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.

ಕೇಜ್ರಿವಾಲ್ ಅವರ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಈ ಹಿಂದೆ ತಿಹಾರ್ ಜೈಲು ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ಪ್ರತಿಕ್ರಿಯೆ ಕೇಳಿದ್ದರು. ಇಂದು ಪ್ರತಿಕ್ರಿಯೆಗಳನ್ನು ಪರಿಗಣಿಸಿದ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿತು.

ಪ್ರಸ್ತುತ, ಕೇಜ್ರಿವಾಲ್ ಅವರು ಕಾನೂನು ತಂಡದೊಂದಿಗೆ ವಾರದಲ್ಲಿ ಎರಡು ಬಾರಿ ಸಭೆಗ ನಡೆಸಲು ಅನುಮತಿಸಲಾಗಿದೆ.

ತಮ್ಮ ವಿರುದ್ಧ ದೇಶಾದ್ಯಂತ 30ಕ್ಕೂ ಹೆಚ್ಚು ಪ್ರಕರಣಗಳಿದ್ದು ಕಾರ್ಯತಂತ್ರ ರೂಪಿಸಲು ತಮಗೆ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸುವ ಅಗತ್ಯವಿದೆ ಎಂದು ಕೋರಿ ಈ ಮೊದಲು ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವರ್ಚುವಲ್ ಕಾನ್ಫರೆನ್ಸ್ ಮೂಲಕ ಅಂತಹ ಸಭೆಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಅವರು ವಿನಂತಿಸಿದ್ದರು. ಆದರೆ, ವಿಶೇಷ ನ್ಯಾಯಾಧೀಶೆ (ಪಿಸಿ ಕಾಯಿದೆ) ಕಾವೇರಿ ಬವೇಜಾ ಅವರು ಈ ಮನವಿಯನ್ನು ತಿರಸ್ಕರಿಸಿದ್ದರು. ಆ ನಂತರ ಕೇಜ್ರಿವಾಲ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇ ಡಿ ಪ್ರಕರಣದಲ್ಲಿ ಜುಲೈ 12 ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಸಿಬಿಐ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಅವರು ಜೈಲಿನಲ್ಲೇ ಇದ್ದಾರೆ.