ಟೈಪ್–2 ಮಧುಮೇಹ (ಡಯಾಬಿಟಿಸ್ ಮೆಲ್ಲಿಟಸ್) ಚಿಕಿತ್ಸೆಗೆ ಬಳಸುವ ಎರಡು ಸ್ಥಿರ ಡೋಸ್ ಸಂಯೋಜನೆ (ಎಫ್‌ಡಿಸಿ) ಇರುವ ಔಷಧಗಳ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.
2018ರಲ್ಲಿ ಸರ್ಕಾರ “ಗ್ಲೈಮಿಪಿರೈಡ್ 1 ಮಿ.ಗ್ರಾಂ/2 ಮಿ.ಗ್ರಾಂ + ಪಿಯೋಗ್ಲಿಟಾಜೋನ್ 15 ಮಿ.ಗ್ರಾಂ/15 ಮಿ.ಗ್ರಾಂ + ಮೆಟ್ಫಾರ್ಮಿನ್ 850 ಮಿ.ಗ್ರಾಂ/850 ಮಿ.ಗ್ರಾಂ” ಹಾಗೂ “ಗ್ಲೈಮಿಪಿರೈಡ್ 1 ಮಿ.ಗ್ರಾಂ/2 ಮಿ.ಗ್ರಾಂ/3 ಮಿ.ಗ್ರಾಂ + ಪಿಯೋಗ್ಲಿಟಾಜೋನ್ 15 ಮಿ.ಗ್ರಾಂ/15 ಮಿ.ಗ್ರಾಂ/15 ಮಿ.ಗ್ರಾಂ + ಮೆಟ್ಫಾರ್ಮಿನ್ 1000 ಮಿ.ಗ್ರಾಂ/1000 ಮಿ.ಗ್ರಾಂ” ಎಂಬ ಸಂಯೋಜನೆಗಳನ್ನು ಒಳಗೊಂಡ ಎಫ್‌ಡಿಸಿ ಔಷಧಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸುವ ಎರಡು ಅಧಿಸೂಚನೆಗಳನ್ನು ಹೊರಡಿಸಿತ್ತು.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಫ್‌ಡಿಸಿ ಔಷಧಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಹಾಗೂ ಹರಿಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಔಷಧಗಳ ಮೇಲಿನ ನಿಷೇಧವನ್ನು ಸಮರ್ಥಿಸಿದ ನ್ಯಾಯಾಲಯ, ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದೆ. ಆ ಆದೇಶವನ್ನು ಕೇಂದ್ರ ಸರ್ಕಾರ ವಿಭಾಗೀಯ ಪೀಠದೆದುರು ಪ್ರಶ್ನಿಸಿತ್ತು.
ಔಷಧಗಳು ಮತ್ತು ಸೌಂದರ್ಯ ವಸ್ತುಗಳ ಕಾಯಿದೆ- 1940ರ ಅಡಿಯಲ್ಲಿ ಇರುವ ಶಾಸನಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏಕ ಸದಸ್ಯ ಪೀಠ ಮಧ್ಯಪ್ರವೇಶಿಸಿ ಎಡವಿದೆ ಎಂದು ವಿಭಾಗೀಯ ಪೀಠ ಇದೀಗ ತೀರ್ಪು ನೀಡಿದೆ.
ಇದಲ್ಲದೆ, ಔಷಧಗಳು ಮತ್ತು ಸೌಂದರ್ಯ ವಸ್ತುಗಳ ಕಾಯಿದೆ, 1940ರ ಸೆಕ್ಷನ್ 26ಎ ಅಡಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಔಷಧವನ್ನು ನಿಷೇಧಿಸುವುದಕ್ಕಾಗಿ ಮಾನವರ ಮೇಲೆ ನೈಜ ಅಥವಾ ಸಾಬೀತಾದ ಹಾನಿ ಉಂಟಾಗಿರುವುದನ್ನು ಮಂಡಿಸುವ ಅಗತ್ಯವಿಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ. ಔಷಧವು ಮಾನವ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇದ್ದರೆ ಸಾಕು ನಿಷೇಧ ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಹೀಗೆ ಮಾಡುವ ಉದ್ದೇಶ ಮುನ್ನೆಚ್ಚರಿಕೆ ಕ್ರಮವಾಗಿದ್ದು ಸ್ಪಷ್ಟ ಹಾನಿಯ ನಿರೀಕ್ಷೆಯ ಬದಲಿಗೆ ಭವಿಷ್ಯದಲ್ಲಿ ಅದನ್ನು ಬಳಸುವುದರಿಂದ ಉಂಟಾಗುವ ಅಥವಾ ಸಂಭವನೀಯ ಹಾನಿಯನ್ನು ಗಮನದಲ್ಲಿಟ್ಟು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅದು ವಿವರಿಸಿದೆ.