

“ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು ಮತ್ತು ತನಿಖಾಧಿಕಾರಿಗಳನ್ನು ಒಳಗೊಂಡು ವರ್ಷದಲ್ಲಿ ನಾಲ್ಕು ಅಥವಾ ಮೂರು ಬಾರಿ ಸಮನ್ವಯ ಸಭೆ ಅಥವಾ ಜಂಟಿ ಸಮ್ಮೇಳನ ನಡೆಸಬೇಕು. ಹೀಗೆ ಮಾಡುವುದರಿಂದ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತದೆ” ಎಂದು ಗೃಹ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಸಲಹೆ ನೀಡಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ ನಗರದ ಕೆಇಬಿ ಎಂಜಿನಿಯರ್ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಹಾಗೂ 17 ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
“ಈಚೆಗೆ ಪ್ರಕರಣವೊಂದರಲ್ಲಿ ತನಿಖಾಧಿಕಾರಿಯು ಕೊಲೆಯಾದ ವ್ಯಕ್ತಿಯ ದೇಹ ಹೊಕ್ಕಿದ್ದ ಗುಂಡುಗಳನ್ನು ಹಾಜರುಪಡಿಸಿದ್ದರು. ಆದರೆ, ಇಂಥದ್ದೇ ಗನ್‌ನಿಂದ ಅದು ಸಿಡಿದಿತ್ತು ಎಂಬುದಕ್ಕೆ ಪೂರಕವಾದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಸಿರಲಿಲ್ಲ. ಹೀಗಿರುವಾಗ ಶಿಕ್ಷೆ ಹೇಗೆ ವಿಧಿಸಲಾಗುತ್ತದೆ? ಹೀಗಾಗಿ ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು ಮತ್ತು ತನಿಖಾಧಿಕಾರಿಗಳನ್ನು ಒಳಗೊಂಡು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಸಮನ್ವಯ ಸಭೆ ಅಥವಾ ಜಂಟಿ ಸಮ್ಮೇಳನ ನಡೆಸುವುದರಿಂದ ಶಿಕ್ಷೆಯ ಪ್ರಮಾಣ ಹೆಚ್ಚಿಸಬಹುದು” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಸಲಹೆ ನೀಡಿದರು.
“ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ಜನರ ವಿಶ್ವಾಸ ಹೆಚ್ಚುವಂತೆ ಮಾಡಬೇಕು. ಸರ್ಕಾರಿ ಅಭಿಯೋಜಕರು ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು. ನಿಷ್ಪಕ್ಷಪಾತವಾಗಿರಬೇಕು, ನ್ಯಾಯದ ಕಾವಲುಗಾರರು, ಪ್ರಕ್ರಿಯೆಯ ಜವಾಬ್ದಾರಿ ಅವರ ಮೇಲಿರುತ್ತದೆ” ಎಂದರು.
“ಕಾನೂನು ಸಚಿವರು ಶಿಕ್ಷೆಯಾಗುವ ಶೇಕಡಾವಾರು ಪ್ರಮಾಣ ಕಡಿಮೆ ಎಂದಿದ್ದಾರೆ. ಗೃಹ ಸಚಿವರು ತಮ್ಮದೇ ಇಲಾಖೆಯ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಿಗೆ ಬದ್ಧತೆಯಿಂದ ಕೆಲಸ ಮಾಡಿದಾಗ ನ್ಯಾಯಾಂಗದ ಉತ್ಕೃಷ್ಟತೆ ಹೆಚ್ಚಾಗುತ್ತದೆ” ಎಂದರು.
“ತನಿಖೆ ಹೆಚ್ಚು ಕಡಿಮೆಯಾದರೆ ಅರ್ಧ ಪ್ರಕರಣ ಅಲ್ಲೇ ಸಾಯುತ್ತದೆ. ಸಂತ್ರಸ್ತರ ಕೇಂದ್ರಿತ ನ್ಯಾಯ ನೋಡಬೇಕೆ ವಿನಾ ಆರೋಪಿ ಕೇಂದ್ರಿತ ನ್ಯಾಯವನ್ನಲ್ಲ. ಆರೋಪ ಪಟ್ಟಿಯನ್ನು ಪರಿಶೀಲನೆ ನಡೆಸಿ, ಅದರಲ್ಲಿ ದೋಷಗಳಿದ್ದರೆ ಹೆಚ್ಚಿನ ತನಿಖೆಗೆ ಆದೇಶಿಸಲು ನ್ಯಾಯಾಲಯಕ್ಕೆ ಕೋರಬೇಕು. ಇದಕ್ಕೂ ಮುನ್ನ, ಆರೋಪ ಪಟ್ಟಿಯ ಪ್ರತಿಯೊಂದನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಅಭಿಯೋಜಕರು ಕಳುಹಿಸುವ ಪರಿಪಾಠ ಶುರು ಮಾಡಬೇಕು. ಇಲ್ಲವಾದಲ್ಲಿ ನ್ಯಾಯಾಧೀಶರು ಮತ್ತು ಅಭಿಯೋಜಕರನ್ನು ದೂರುವ ಕೆಲಸವಾಗುತ್ತದೆ” ಎಂದರು.
“ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಾಗಿ ವಜಾಗೊಳ್ಳುತ್ತಿವೆ. ತನಿಖಾಧಿಕಾರಿ ಸಲ್ಲಿಸುವ ವರದಿಯನ್ನು ಸರ್ಕಾರಿ ಅಭಿಯೋಜಕರು ಪರಿಶೀಲನೆ ನಡೆಸಿದರೆ ಪ್ರಕರಣ ವಜಾ ಆಗುವುದು ಮತ್ತು ಆರೋಪಿಗಳು ಖುಲಾಸೆಗೊಳ್ಳುವುದು ಕಡಿಮೆಯಾಗುತ್ತದೆ. ಆರೋಪ ಪಟ್ಟಿ ಸಲ್ಲಿಸಲು ಕೊನೆಯ ದಿನದಂದು ತನಿಖಾಧಿಕಾರಿ ವರದಿ ತರಬಾರದು. ಆರೋಪ ಪಟ್ಟಿ ಪರಿಶೀಲಿಸಿ ಹೆಚ್ಚಿನ ತನಿಖೆಯ ಅಗತ್ಯವಿದ್ದರೆ ತನಿಖಾಧಿಕಾರಿಗೆ ಅಭಿಯೋಜಕರು ತಿಳಿಸಬೇಕು” ಎಂದರು.
ನ್ಯಾ. ಸಂದೇಶ್ ಅವರು “ಎಷ್ಟೋ ನ್ಯಾಯಾಲಯಗಳಲ್ಲಿ ಸರ್ಕಾರಿ ಅಭಿಯೋಜಕರಿಗೆ ಕುಳಿತುಕೊಳ್ಳಲು ಜಾಗವಿಲ್ಲ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲ ಎಂಬುದನ್ನು ಮುಖ್ಯಮಂತ್ರಿ, ಗೃಹ ಮತ್ತು ಕಾನೂನು ಸಚಿವರ ಗಮನಕ್ಕೆ ತರಲು ಬಯಸುತ್ತೇನೆ. ನಾಲ್ಕು ನ್ಯಾಯಮೂರ್ತಿಗಳಿಗೆ ಒಬ್ಬರೇ ಒಬ್ಬರು ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಇದ್ದಾರೆ ಎನ್ನಲಾಗಿದೆ. ಹೀಗಾಗಿ, ನೇಮಕಾತಿಯ ಕಡೆ ಸರ್ಕಾರ ಗಮನಹರಿಸಬೇಕಿದೆ” ಎಂದರು.
ನ್ಯಾಯಾಧೀಶರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಸೇರಿದಂತೆ ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತ ಇಲ್ಲ. ಹಿಂದಿನ ಸರ್ಕಾರದಲ್ಲಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನನ್ನನ್ನು ಉದ್ದೇಶಿಸಿ ʼಗುಡುಗಿದ ಜಜ್, ನಡುಗಿದ ಸರ್ಕಾರʼ ಎಂದು ಹೇಳಲಾಗಿತ್ತು. ಅಂದು ನನ್ನನ್ನು ಕೆಲವರು ಒಂದು ಪಕ್ಷದ ಏಜೆಂಟ್ ಮಾಡಿಬಿಟ್ಟಿದ್ದರು. ಆದರೆ, ಇಡೀ ದೇಶ ನನ್ನ ಜೊತೆ ನಿಂತಿದ್ದನ್ನು ಮರೆಯಲಾಗದು. ಅಂದು ಸರ್ಕಾರ ನಡೆಸುತ್ತಿದ್ದ ಪಕ್ಷದವರು ನನ್ನನ್ನು ಒಂದು ಪಕ್ಷದ ಏಜೆಂಟ್ ಮಾಡಿಬಿಟ್ಟಿದ್ದರು. ಅದು ಯಾವ ಪಕ್ಷ ಎಂದು ನಾನು ಹೇಳುವುದಿಲ್ಲ. ಯಾವುದೇ ಪಕ್ಷದ ಏಜೆಂಟ್ ಎಂದು ಕರೆದರೂ ಚಿಂತಿಸುವುದಿಲ್ಲ, ನ್ಯಾಯಾಧೀಶನಿಗೆ ಜನಹಿತವೇ ಮುಖ್ಯ ಎಂದರು.
2022ರ ಜುಲೈನಲ್ಲಿ ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಅವರ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು “ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) (ಸದ್ಯ ಲೋಕಾಯುಕ್ತ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳೇ ಕಲೆಕ್ಷನ್ ಸೆಂಟರ್‌ಗಳಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
“ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ” ಎಂದು ಗುಡುಗಿದ್ದರು. ಆಗ ಎಸಿಬಿಯ ಮುಖ್ಯಸ್ಥರಾಗಿ ಹಾಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿರುವ ಸೀಮಂತ್ ಕುಮಾರ್ ಸಿಂಗ್ ಇದ್ದರು.
ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಲಿಖಿತವಾಗಿ ನ್ಯಾ. ಸಂದೇಶ್ ಅವರು ಆದೇಶ ಬರೆದಿದ್ದರು. ಸುಪ್ರೀಂ ಕೋರ್ಟ್‌ಗೆ ಹೋಗಿ ಸೀಮಂತ್ ಕುಮಾರ್ ಅವರು ಹೈಕೋರ್ಟ್ ಆದೇಶದಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ತೆಗೆಸಿ ಹಾಕುವ ಆದೇಶ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.