ಜನಪ್ರಿಯ ಫಾಸ್ಟ್ ಫುಡ್ ಹೋಟೆಲ್ ಸಮೂಹ ವಾವ್ ಮೊಮೊ ಹೋಲುವ ವಾಣಿಜ್ಯ ಚಿಹ್ನೆ ಬಳಸದಂತೆ ಗುರ್‌ಗಾಂವ್ ಮೂಲದ ರೆಸ್ಟರಂಟ್ ವಾವ್ ಡಿಲಿಷಸ್‌ಗೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ [ವಾವ್ ಮೊಮೊ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಾವ್ ಡಿಲಿಷಸ್ ನಡುವಣ ಪ್ರಕರಣ].
ವಾವ್ ಡೆಲೀಷಿಯಸ್ ವಿರುದ್ಧ ವಾವ್ ಮೊಮೊ ಮಂಡಿಸಿರುವ ವಾದ ಮೇಲ್ನೋಟಕ್ಕೆ ಸಾಬೀತಾಗಿದ್ದು 'ವಾವ್ ಡಿಲೀಷಿಯಸ್ ಚಿಹ್ನೆ ಬಳಸುವುದನ್ನು ಮುಂದುವರೆಸಿದರೆ ಅದರಿಂದ ಸಾರ್ವಜನಿಕರ ಮನದಲ್ಲಿ ಗೊಂದಲ ಮೂಡಲಿದೆ ಎಂದು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ತಿಳಿಸಿದೆ. ಹೀಗಾಗಿ ಅದು ವಾವ್ ಮೊಮೊ ಪರವಾಗಿ ಏಕಪಕ್ಷೀಯ ಮಧ್ಯಂತರ ಆದೇಶ ನೀಡಿದೆ.
ವಾವ್ ಮೊಮೊ ತಿನಿಸಾದ ಮೊಮೊಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಭಾರತೀಯ ಫಾಸ್ಟ್‌ಫುಡ್ ಉದ್ಯಮವಾಗಿದೆ. 2008ರಲ್ಲಿ ಸ್ಥಾಪನೆಯಾದ ಕೋಲ್ಕತ್ತಾ ಮೂಲದ ರೆಸ್ಟರಂಟ್ ದೇಶದ ಅನೇಕ ನಗರಗಳಲ್ಲಿ 600 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಸಸ್ಯಾಹಾರ ಇಲ್ಲವೇ ಮಾಂಸಾಹಾರ ಬಳಸಿ, ಬೇಯಿಸಿದ ಇಲ್ಲವೇ ಕರಿದ ಮೊಮೊಗಳನ್ನು ಅದು ಗ್ರಾಹಕರಿಗೆ ಉಣಬಡಿಸುತ್ತದೆ.
ಗುರುಗಾಂವ್‌ನ ಸುಭಾಷ್ ಚೌಕ್‌ನಲ್ಲಿರುವ ವಾವ್ ಡಿಲಿಷಸ್ ಚೀನಿ ಖಾದ್ಯಗಳು ಮತ್ತು ವಿವಿಧ ಭಕ್ಷ್ಯಗಳನ್ನು ಒದಗಿಸುತ್ತದೆ. ಅವುಗಳನ್ನು ಜನಪ್ರಿಯ ಆಹಾರ ವಿತರಣಾ ಆನ್‌ಲೈನ್ ವೇದಿಕೆ ಜೊಮಾಟೊ ಮೂಲಕ ತರಿಸಿಕೊಳ್ಳಬಹುದಾಗಿದೆ.
ವಾವ್ ಮೊಮೊ ಪರ ವಾದ ಮಂಡಿಸಿದ ವಕೀಲ ಅಂಕುರ್ ಸಂಗಲ್, ವಾವ್ ಮೊಮೊದ ವಾಣಿಜ್ಯ ಚಿಹ್ನೆಯಲ್ಲಿರುವ ವಾವ್ ಎಂಬ ಪದವನ್ನು ವಾವ್ ಡಿಲಿಷಸ್ ಬಳಸಿದೆ. ಅದನ್ನು ದಶಕದ ಹಿಂದೆಯೇ ವಾಣಿಜ್ಯ ಚಿಹ್ನೆಯಾಗಿ ನೋಂದಾಯಿಸಿಕೊಳ್ಳಲಾಗಿತ್ತು. ಹೀಗಾಗಿ ಹೀಗೆ ವಂಚಿಸಿ ವಾಣಿಜ್ಯ ಚಿಹ್ನೆ ಬಳಸುವುದು ವಾಣಿಜ್ಯ ಚಿಹ್ನೆ ಕಾಯಿದೆ 1999ರ ಉಲ್ಲಂಘನೆಯಾಗುತ್ತದೆ ಎಂದರು.
ವಕೀಲರ ವಾದ ಪುರಸ್ಕರಿಸಿದ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿದ್ದು ಏಪ್ರಿಲ್ 2025ರಲ್ಲಿ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.
ವಾವ್ ಮೊಮೊನ ವಾಣಿಜ್ಯ ಚಿಹ್ನೆ ಉಲ್ಲಂಘಿಸದಂತೆ ವಾವ್ ಪಂಜಾಬಿ ಫಾಸ್ಟ್ ಫುಡ್ ರೆಸ್ಟರಂಟ್‌ಗೆ ದೆಹಲಿ ಹೈಕೋರ್ಟ್ ಮಾರ್ಚ್ 2024 ರಲ್ಲಿ, ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಆದರೆ ಆಗಸ್ಟ್ 2023ರಲ್ಲಿ ಇದೇ ನ್ಯಾಯಾಲಯ ವಾವ್ ಚೈನಾ ಬ್ರಿಸ್ಟ್ರೋದ ವಾಣಿಜ್ಯ ಚಿಹ್ನೆಯನ್ನು ಬಳಸದಂತೆ ವಾವ್ ಮೊಮೊಗೆ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.