ʼನಂದಿನಿʼ ವಾಣಿಜ್ಯ ಚಿಹ್ನೆ ಬಳಸದಂತೆ ಆಹಾರ ತಯಾರಿಕಾ ಕಂಪೆನಿಗೆ ಶಾಶ್ವತ ನಿರ್ಬಂಧ ವಿಧಿಸಿದ ಬೆಂಗಳೂರು ನ್ಯಾಯಾಲಯ

ಜೊತೆಗೆ ನಂದಿನಿ ಹೋಮ್ ಮೇಡ್ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗಳನ್ನು ಬಳಸದಂತೆಯೂ ನ್ಯಾಯಾಲಯ ತಾಕೀತು ಮಾಡಿದೆ.
KMF and CIty Civil Court Complex, Bengaluru
KMF and CIty Civil Court Complex, Bengaluru
Published on

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ವಾಣಿಜ್ಯ ಹೆಸರಾದ ʼನಂದಿನಿʼ ಪದವನ್ನು ಬಳಕೆ ಮಾಡದಂತೆ ಬೆಂಗಳೂರಿನ ಆಹಾರ ತಯಾರಿಕಾ ಕಂಪೆನಿಯೊಂದಕ್ಕೆ XVIII ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ನಿರ್ಬಂಧ ವಿಧಿಸಿದೆ.

“ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಶ್ರೀ ಗುರು ರಾಘವೇಂದ್ರ ಆಹಾರ ಉತ್ಪನ್ನ ಪಾಲುದಾರ ಸಂಸ್ಥೆ ಮತ್ತಿತರರು ಹಾಗೂ ಅವರ ವ್ಯಾಪ್ತಿಗೆ ಬರುವ ಯಾರೇ ಆದರೂ ಕೆಎಂಎಫ್‌ನ ನೋಂದಾಯಿತ ಪದ ಚಿಹ್ನೆ/ ವಾಣಿಜ್ಯ ಚಿಹ್ನೆ ʼನಂದಿನಿʼಯನ್ನು ʼನಂದಿನಿ ಹೋಮ್‌ ಮೇಡ್‌ʼ ಹೆಸರನ್ನು ಅಥವಾ ಕೆಎಂಎಫ್‌ ಪ್ರತಿಪಾದಿಸಿರುವಂತೆ ಇನ್ನಾವುದೇ ಮೋಸಗೊಳಿಸುವ ರೀತಿಯ ಪದ ಗುರುತುಗಳನ್ನು ಬಳಸುವುದನ್ನು ಮತ್ತು ರವಾನಿಸುವುದನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ” ಎಂದು ನ್ಯಾಯಾಧೀಶರಾದ ಪದ್ಮ ಪ್ರಸಾದ್‌ ಆದೇಶಿಸಿದ್ದಾರೆ.  

Also Read
ʼವೋಗ್ʼ ವಾಣಿಜ್ಯ ಚಿಹ್ನೆ ಸಮರ: ಬೆಂಗಳೂರಿನ ಫ್ಯಾಷನ್ ಶಿಕ್ಷಣ ಸಂಸ್ಥೆ ಪರ ತೀರ್ಪು ನೀಡಿದ ಹೈಕೋರ್ಟ್

ಜೊತೆಗೆ ಆಕ್ಷೇಪಾರ್ಹ ಹೆಸರನ್ನು ಹೊಂದಿರುವ ಬಿಲ್‌ಗಳು, ನೆಗೆಟಿವ್‌ಗಳು, ಪಾಸಿಟಿವ್‌ಗಳು, ಟ್ರಾನ್ಸ್‌ಪೆರೆನ್ಸಿಗಳು, ಬ್ಲಾಕ್‌ಗಳನ್ನು ಕೂಡಲೇ ನಾಶ ಮಾಡಬೇಕು. ನಂದಿನಿ ಹೋಮ್‌ ಮೇಡ್‌ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್‌ ಖಾತೆಗಳನ್ನು ಬಳಸಬಾರದು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ತಾನು ದಕ್ಷಿಣ ಭಾರತದ ಅತಿದೊಡ್ಡ ಸಹಕಾರ ಹಾಲು ಉತ್ಪನ್ನ ಒಕ್ಕೂಟವಾಗಿದ್ದು ತನ್ನ ವ್ಯಾಪಾರಿ ಹೆಸರು ನಂದಿನಿ ಮನೆ ಮಾತಾಗಿದೆ. ಭಾರತದಲ್ಲಿ ಇದೊಂದು ಪ್ರಸಿದ್ಧ ವಾಣಿಜ್ಯ ಚಿಹ್ನೆಯಾಗಿದೆ. ಭಾರಿ ವಹಿವಾಟಿನಲ್ಲಿ ತೊಡಗಿಕೊಂಡಿರುವ ತಾನು ಜಾಹೀರಾತಿಗಾಗಿ ಅಪಾರ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದಾಗಿ ಕೆಎಂಎಫ್‌ ವಾದಿಸಿತ್ತು.

Also Read
ದೇಶದ 68% ಹಾಲು ಕಲಬೆರಕೆ ಎಂದಿದ್ದ ʼಅಕ್ಷಯಕಲ್ಪʼ ಜಾಹೀರಾತಿಗೆ ಕೆಎಂಎಫ್‌ ಆಕ್ಷೇಪ; ಮಧ್ಯಂತರ ತಡೆ ನೀಡಿದ ನ್ಯಾಯಾಲಯ

“ಅಕ್ಕಿಹಿಟ್ಟು ಮತ್ತು ಇಡ್ಲಿ/ದೋಸೆ ಹಿಟ್ಟಿನ ವ್ಯಾಪಾರಕ್ಕೆ  ʼನಂದಿನಿʼ ವಾಣಿಜ್ಯ ಹೆಸರನ್ನು ಶ್ರೀ ಗುರು ರಾಘವೇಂದ್ರ ಆಹಾರ ಉತ್ಪನ್ನ ಕಂಪೆನಿ ಬಳಸಿಕೊಂಡಿತ್ತು. ವಾಣಿಜ್ಯ ಹೆಸರನ್ನು ದುರುಪಯೋಗಪಡಿಸಿಕೊಳ್ಳದಂತೆ ಎರಡು ಬಾರಿ ಕಾನೂನು ನೋಟಿಸ್‌ ನೀಡಿದ್ದರೂ ಕಂಪೆನಿ ಉತ್ತರಿಸಲು ವಿಫಲವಾಗಿತ್ತು. ಈ ಮಧ್ಯೆ ಮಾರಾಟ ನಿಲ್ಲಿಸುವುದಾಗಿ ಕಂಪೆನಿ ಪರವಾಗಿ ಹರೀಶ್‌ ಎಂಬುವವರು ರಾಮನಗರ ಡಿಸಿಪಿ ಕಛೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೂ ಮಾರಾಟ ನಿಂತಿರಲಿಲ್ಲ” ಎಂದು ಕೆಎಂಎಫ್‌ ಪರವಾಗಿ ಜಸ್ಟ್‌ ಲಾ ಕಾನೂನು ಸಂಸ್ಥೆ ವಕೀಲರಾದ ಎಸ್‌ ಶ್ರೀರಂಗ ಅವರು ಅಹವಾಲು ಸಲ್ಲಿಸಿದ್ದರು.  

ಆಕ್ಷೇಪಿತ ಸಂಸ್ಥೆಯು ಕಾನೂನುಬಾಹಿರವಾಗಿ ಮತ್ತು ತಪ್ಪು ನಿರೂಪಣೆಯ ಆಧಾರದಲ್ಲಿ ನಂದಿನಿ ಹೋಮ್‌ ಮೇಡ್‌ ನೋಂದಣಿ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯ ವಾಣಿಜ್ಯ ಚಿಹ್ನೆಯನ್ನು ಸರಿಪಡಿಸಿಕೊಳ್ಳಲು/ ರದ್ದುಗೊಳಿಸಲು ಕೆಎಂಎಫ್‌ ಅರ್ಜಿ ಸಲ್ಲಿಸಿತ್ತು.  ಅದರಂತೆ ದಾವೆಯಲ್ಲಿ ಹೇಳಲಾದ ಪರಿಹಾರಗಳಿಗಾಗಿ ಪ್ರಾರ್ಥಿಸಿತ್ತು. ಸಮನ್ಸ್‌ ನೀಡಿದ ಹೊರತಾಗಿಯೂ ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ. 17ರಂದು  ಏಕಪಕ್ಷೀಯ (ಎಕ್ಸ್‌ಪಾರ್ಟೆ) ಆದೇಶ ನೀಡಿದ ನ್ಯಾಯಾಲಯ ಕಂಪೆನಿಯು ನಂದಿನಿ ಹೆಸರಿನ ಬಳಕೆ ಮಾಡದಂತೆ ನಿರ್ಬಂಧ ವಿಧಿಸಿದೆ.  

Kannada Bar & Bench
kannada.barandbench.com