Delhi High Court Gold Jewellery 
ಸುದ್ದಿಗಳು

ಚಿನ್ನಾಭರಣ ವಿಚಾರದಲ್ಲಿ ವಿಮಾನಯಾನಿಗಳಿಗೆ ತೊಂದರೆ: ಬ್ಯಾಗೇಜ್ ನಿಯಮಾವಳಿ ಮರುಪರಿಶೀಲಿಸುವಂತೆ ದೆಹಲಿ ಹೈಕೋರ್ಟ್ ಸೂಚನೆ

ನೈಜ ಪ್ರಯಾಣಿಕರಿಗೆ ಕಿರುಕುಳ ನೀಡಲು ಬಳಸಬಹುದಾದ ಅನಿಯಂತ್ರಿತ ಅಧಿಕಾರ ಕಸ್ಟಮ್ಸ್ ಅಧಿಕಾರಿಗಳಿಗೆ ಇದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣಿಕರಿಂದ ಕಸ್ಟಮ್ಸ್‌ ಅಧಿಕಾರಿಗಳು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಗೇಜ್ ನಿಯಮಾವಳಿ 2016ನ್ನು ಮರುಪರಿಶೀಲಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ [ಖಮರ್ ಜಹಾನ್ ಮತ್ತು ಭಾರತ ಒಕ್ಕೂಟ ಸರ್ಕಾರದ ಹಣಕಾಸು ಸಚಿವಾಲಯ ನಡುವಣ ಪ್ರಕರಣ].

 ಜಾರಿಯಲ್ಲಿರುವ ಹಳೆಯ ನಿಯಮಾವಳಿ ಪ್ರಕಾರ ನಿರ್ದಿಷ್ಟ ಮಿತಿಗೂ ಹೆಚ್ಚಿನ ಆಭರಣ ಸಾಗಿಸುವ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಮೂರ್ತಿಗಳಾದ ಪ್ರತಿಭಾ ಸಿಂಗ್ ಮತ್ತು ಧರ್ಮೇಶ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಎತ್ತಿ ತೋರಿಸಿದೆ.

ಬ್ಯಾಗೇಜ್ ನಿಯಮಾವಳಿ 5ರ ಪ್ರಕಾರ ನಲವತ್ತು ಗ್ರಾಂ ಚಿನ್ನದ ಮೌಲ್ಯ ರೂ. 1,00,000/- ಇತ್ತು. ಇದೀಗ ರೂ. 1,00,000/- ಮೊತ್ತಕ್ಕೆ ಕೇವಲ 15 ಗ್ರಾಂ ಚಿನ್ನ ಖರೀದಿಸಬಹುದಾಗಿದ್ದು ಪ್ರಸ್ತುತ ಚಿನ್ನದ ಮಾರುಕಟ್ಟೆ ದರ ಪರಿಗಣಿಸಿ ಬ್ಯಾಗೇಜ್ ನಿಯಮಾವಳಿ ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ನೈಜ ಪ್ರಯಾಣಿಕರಿಗೆ ಕಿರುಕುಳ ನೀಡಲು ಬಳಸಬಹುದಾದ ಅನಿಯಂತ್ರಿತ ಅಧಿಕಾರ ಕಸ್ಟಮ್ಸ್‌ ಅಧಿಕಾರಿಗಳಿಗೆ ಇದೆ. ಹೀಗಾಗಿ ಭಾರತಕ್ಕೆ ಬರುವ ದೇಶದ ಇಲ್ಲವೇ ವಿದೇಶದ ನೈಜ ಪ್ರಯಾಣಿಕರು ಇಲ್ಲವೇ ಪ್ರವಾಸಿಗರಿಗೆ ಕಿರುಕುಳ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (CBIC) ಅಧ್ಯಕ್ಷರಿಗೆ ನ್ಯಾಯಾಲಯ ತಾಕೀತು ಮಾಡಿದೆ.  ಇದರೊಂದಿಗೆ ಚಿನ್ನ ಕಳ್ಳಸಾಗಣೆಯನ್ನುಸೂಕ್ತ ರೀತಿಯಲ್ಲಿ ತಡೆಗಟ್ಟಲಾಗಿದೆ ಎಂಬುದನ್ನೂ ಅವರು ಖಚಿತಪಡಿಸಿಕೊಳ್ಳಬೇಕು ಎಂದಿದೆ.

ತಮ್ಮ ಎರಡು ಚಿನ್ನದ ಕಡಗಗಳು ಹಾಗೂ ಸರವನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಕಸ್ಟಮ್ಸ್ ಜಂಟಿ ಆಯುಕ್ತರು ಮತ್ತು ಕಸ್ಟಮ್ಸ್ ಆಯುಕ್ತರು (ಅಪೀಲುಗಳು) ಎತ್ತಿಹಿಡಿದಿದ್ದ ಆದೇಶವನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕಸ್ಟಮ್ಸ್ ಕಾಯಿದೆ 1962ರ ಅಡಿಯಲ್ಲಿ ಅರ್ಜಿದಾರರಿಗೆ ₹75,000 ದಂಡ ಮತ್ತು ₹1,10,000 ವೈಯಕ್ತಿಕ ದಂಡ ವಿಧಿಸಲಾಗಿತ್ತು.

ಆದರೆ ನಿಯಮಾವಳಿ ಹಳತು ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ ಶೋಧ ಮತ್ತು ಚಿನ್ನ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಇರುವ ಅನಿಯಂತ್ರಿತ ಅಧಿಕಾರವನ್ನು ಖಂಡಿಸಿದೆ.

 ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಹೊಂದಿಕೆಯಾಗದ ಕಾರಣ ಬ್ಯಾಗೇಜ್‌ ನಿಯಮಾವಳಿ ಅಡಿ ಅನುಮತಿಸಬಹುದಾದ ಚಿನ್ನದ ಮೌಲ್ಯವನ್ನು ಸಿಬಿಐಸಿ ಮರುಪರಿಶೀಲಸಬೇಕು ಎಂದು ಅದು ಹೇಳಿತು. ಚಿನ್ನ ಕಳ್ಳಸಾಗಣೆಗೆ ಕಡಿವಾಣ ಹಾಕಬೇಕಾದರೂ ನೈಜ ಪ್ರಯಾಣಿಕರಿಗೆ ಕಿರುಕುಳ ನೀಡಲು ಈ ನಿಯಮಾವಳಿ ಬಳಸುವಂತಿಲ್ಲ ಎಂದಿತು.

ಮದುವೆ ಮತ್ತಿತರ ಸಮಾರಂಭಗಳಿಗಾಗಿ ಆಭರಣಗಳೊಂದಿಗೆ ತೆರಳುವ ಪ್ರವಾಸಿಗರು ಪ್ರಯಾಣಿಕರ ಅನುಮತಿಸುವ ಮಿತಿಗಳಿಗಿಂತಲೂ ಹೆಚ್ಚಿನ ಮೌಲ್ಯದ ಚಿನ್ನವನ್ನು ಇರಿಸಿಕೊಂಡಿರಬಹುದು. ಅಂತಹ ಪ್ರವಾಸಿಗರು ಇಲ್ಲವೇ ಪ್ರಯಾಣಿಕರು ವಿವರವಾದ ಘೋಷಣೆ ಸಲ್ಲಿಸಬೇಕೆಂದು ನಿರೀಕ್ಷಿಸಬಾರದು. ಹೀಗೆ ಮಾಡಿದರೆ ವಿಮಾನ ನಿಲ್ದಾಣಗಳ ಮೂಲಕ ಭಾರತಕ್ಕೆ ಬರುವ ಮತ್ತು ನಿರ್ಗಮಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಯಾಣಿಕ ಸ್ನೇಹಿಯಲ್ಲದಂತೆ ಮಾಡುತ್ತದೆ ಎಂದು ಅದು ಹೇಳಿದೆ. ಹೀಗಾಗಿ ನಿಯಮಾವಳಿಗಳಿಗೆ ಮಾಡಬೇಕಾದ ಬದಲಾವಣೆಯ ವಿವರಗಳನ್ನು ಒಳಗೊಂಡ ವರದಿಯನ್ನು ಮಾರ್ಚ್ 27, 2025 ರೊಳಗೆ  ಸಲ್ಲಿಸಲು ಸಿಬಿಐಸಿಗೆ ನ್ಯಾಯಾಲಯ ಸೂಚಿಸಿದೆ.