ಲೇಖಕ ಸಲ್ಮಾನ್ ರಶ್ದಿ ಅವರ ಕೃತಿ ʼದ ಸಟಾನಿಕ್ ವರ್ಸಸ್ʼ ಆಮದನ್ನು ನಿಷೇಧಿಸುವ ಕಸ್ಟಮ್ಸ್ ಅಧಿಸೂಚನೆ ಈಗ ಅಸ್ತಿತ್ವದಲ್ಲಿಲ್ಲ ಎಂದು ಭಾವಿಸಬೇಕು ಎಂಬುದಾಗಿ ದೆಹಲಿ ಹೈಕೋರ್ಟ್ ಈಚೆಗೆ ತಿಳಿಸಿದೆ [ಶಾಂದಿಪಾನ್ ಖಾನ್ ಮತ್ತು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ ಅಧ್ಯಕ್ಷರ ನಡುವಣ ಪ್ರಕರಣ].
ಪುಸ್ತಕದ ಆಮದನ್ನು ನಿಷೇಧಿಸುವ 1988 ರ ಅಧಿಸೂಚನೆಯನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ಪುಸ್ತಕ ಇಸ್ಲಾಮ್ ಧರ್ಮವನ್ನು ದೂಷಿಸುತ್ತದೆ ಎಂದು ಮುಸ್ಲಿಂ ಸಮುದಾಯದ ಸದಸ್ಯರು ನೀಡಿದ್ದ ದೂರಿನ ಆಧಾರದ ಮೇಲೆ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ 1988ರಲ್ಲಿ ಕೃತಿ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಕಾರಣಗಳಿಗಾಗಿ ತೆಗೆದುಕೊಂಡ ನಿರ್ಧಾರವನ್ನು ವರ್ಷಗಳ ನಂತರ, ಕೇಂದ್ರದ ಮಾಜಿ ಸಚಿವ ಕೆ.ನಟವರ್ ಸಿಂಗ್ ಸಮರ್ಥಿಸಿಕೊಂಡಿದ್ದರು.
ಅಧಿಕಾರಿಗಳು ಅಧಿಸೂಚನೆಯ ಪ್ರತಿ ಸಲ್ಲಿಸಲು ವಿಫಲವಾದ ಕಾರಣ, ನ್ಯಾಯಮೂರ್ತಿಗಳಾದ ರೇಖಾ ಪಲ್ಲಿ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ಪೀಠ ನವೆಂಬರ್ 5ರಂದು ನಿಷೇಧಕ್ಕಿರುವ ಮಾನ್ಯತೆ ತಿರಸ್ಕರಿಸಿತು.
"ಮೇಲಿನ ಸನ್ನಿವೇಶಗಳ ಮೂಸೆಯಲ್ಲಿ, ಅಂತಹ ಯಾವುದೇ ಅಧಿಸೂಚನೆ ಅಸ್ತಿತ್ವದಲ್ಲಿಲ್ಲ ಎಂದು ಭಾವಿಸುವುದನ್ನು ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿಲ್ಲ, ಆದ್ದರಿಂದ, ನಾವು ಅದರ (ನಿಷೇಧದ) ಸಿಂಧುತ್ವ ಪರೀಕ್ಷಿಸಲು ಮತ್ತು ರಿಟ್ ಅರ್ಜಿ ನಿರುಪಯುಕ್ತವೆಂದು ಪರಿಗಣಿಸಲು ಸಾಧ್ಯವಿಲ್ಲ" ಎಂಬುದಾಗಿ ನ್ಯಾಯಾಲಯ ಹೇಳಿದೆ.
ಪುಸ್ತಕ ನಿಷೇಧಿಸಿರುವ ಹಿನ್ನೆಲೆಯಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ 2019 ರಲ್ಲಿ ಶಾಂದಿಪಾನ್ ಖಾನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅಧಿಸೂಚನೆಯ ಪ್ರತಿ ಯಾವುದೇ ಅಧಿಕೃತ ಜಾಲತಾಣದಲ್ಲಾಗಲೀ ಅಥವಾ ಯಾವುದೇ ಅಧಿಕಾರಿಗಳ ಬಳಿಯಾಗಲೀ ಲಭ್ಯವಿಲ್ಲ ಎಂದು ಅವರು ಹೇಳಿದ್ದರು. ಖಾನ್ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಗೃಹ ವ್ಯವಹಾರಗಳ ಸಚಿವಾಲಯ ಪುಸ್ತಕ ನಿಷೇಧಗೊಂಡಿರುವುದನ್ನು ದೃಢಪಡಿಸಿತ್ತು.
ಅಧಿಸೂಚನೆ ಅಸ್ತಿತ್ವದಲ್ಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡುವುದರೊಂದಿಗೆ, ಖಾನ್ ಭಾರತಕ್ಕೆ ಪುಸ್ತಕ ಆಮದು ಮಾಡಿಕೊಳ್ಳಲು ಅನುಮತಿ ದೊರೆತಿದೆ. ಅರ್ಜಿದಾರರು ಕಾನೂನು ಪ್ರಕಾರ ಪುಸ್ತಕಕ್ಕೆ ಸಂಬಂಧಿಸಿದಂತೆ ಎಲ್ಲಾ ಕ್ರಮ ಕೈಗೊಳ್ಳಲು ಅರ್ಹರು ಎಂದು ಪೀಠ ನುಡಿದಿದೆ.
ಹೈಕೋರ್ಟ್‌ನ ಈ ನಿರ್ಧಾರ ಪುಸ್ತಕದ ಆಮದಿನ ಮೇಲಿನ 36 ವರ್ಷಗಳ ಸುದೀರ್ಘ ನಿಷೇಧವನ್ನು ತೆಗೆದುಹಾಕುತ್ತದೆ. ಸ್ವಾರಸ್ಯವೆಂದರೆ, ಅಧಿಸೂಚನೆಯನ್ನು ಸ್ವತಃ ಸಿದ್ಧಪಡಿಸಿದ್ದ ಅಧಿಕಾರಿಯೇ ಅದರ ಪ್ರತಿ ನೀಡಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇತ್ತ ಕೇಂದ್ರ ಸರ್ಕಾರವೇ ಪ್ರಕರಣದಿಂದ ಕೈತೊಳೆದುಕೊಂಡಿತ್ತು. ತಮ್ಮ ಪರವಾಗಿಯೂ ಅಂತೆಯೇ ಆದೇಶಕ್ಕನುಗಣವಾಗಿಯೂ ಅರ್ಜಿ ಸಮರ್ಥಿಸಿಕೊಳ್ಳುವಂತೆ ಕಸ್ಟಮ್ಸ್ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು.
ಅರ್ಜಿದಾರರ ಪರ ವಕೀಲರಾದ ಉದ್ದಂ ಮುಖರ್ಜಿ ಮತ್ತು ಸ್ವಪ್ನಿಲ್ ಪಟ್ಟನಾಯಕ್ ವಾದ ಮಂಡಿಸಿದರು. ಸರ್ಕಾರವನ್ನು ಹಿರಿಯ ಸ್ಥಾಯಿ ವಕೀಲ ಅನುರಾಗ್ ಓಜಾ, ವಕೀಲರಾದ ಸುಭಮ್ ಕುಮಾರ್, ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ರವಿ ಪ್ರಕಾಶ್ ಹಾಗೂ ತಹಾ ಯಾಸಿನ್ ಮತ್ತು ಯಶಾರ್ಥ್ ಪ್ರತಿನಿಧಿಸಿದ್ದರು.