Saket Gokhale, Lakshmi Puri  
ಸುದ್ದಿಗಳು

ಮಾನಹಾನಿ ಪ್ರಕರಣ: ಕೇಂದ್ರ ಸಚಿವರ ಪತ್ನಿಗೆ ₹50 ಲಕ್ಷ ಪರಿಹಾರ ನೀಡಲು ಟಿಎಂಸಿ ಸಂಸದ ಗೋಖಲೆಗೆ ದೆಹಲಿ ಹೈಕೋರ್ಟ್ ಸೂಚನೆ

Bar & Bench

ಕೇಂದ್ರ ಸಚಿವರೊಬ್ಬರ ಪತ್ನಿ ಹಾಗೂ ನಿವೃತ್ತ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ₹ 50 ಲಕ್ಷ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಎಂಟು ವಾರದೊಳಗೆ ಆದೇಶ ಪಾಲಿಸುವಂತೆ ತಿಳಿಸಿರುವ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಮತ್ತು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸುವಂತೆ ಗೋಖಲೆ ಅವರಿಗೆ ಸೂಚಿಸಿದ್ದಾರೆ.

ಲಕ್ಷ್ಮಿ ಪುರಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ. ಆದಾಯ ಮೀರಿ ಸ್ವಿಟ್ಸರ್ಲೆಂಡ್‌ನಲ್ಲಿ ಆಕೆ ಆಸ್ತಿ ಗಳಿಸಿದ್ದಾರೆ ಎಂದು ಗೋಖಲೆ ಆರೋಪಿಸಿದ್ದರು.  ಈ ಹಿನ್ನೆಲೆಯಲ್ಲಿ ಗೋಖಲೆ ಅವರ ವಿರುದ್ಧ ಲಕ್ಷ್ಮಿ ಮೊಕದ್ದಮೆ ದಾಖಲಿಸಿದ್ದರು.

ಗೋಖಲೆ ಅವರ ಟ್ವೀಟ್‌ಗಳು ಮಾನಹಾನಿಕರ, ದುರುದ್ದೇಶಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಆಧರಿಸಿವೆ ಎಂದು ಲಕ್ಷ್ಮಿ ಅವರು ದೂರಿದ್ದರು. ಗೋಖಲೆ ಅವರನ್ನು ಯಾವುದೇ ವಕೀಲರು ಪ್ರತಿನಿಧಿಸಿರಲಿಲ್ಲ.  

ವಾದ ಆಲಿಸಿದ ನ್ಯಾಯಮೂರ್ತಿ ಭಂಭಾನಿ ಅವರು ಗೋಖಲೆ ಅವರ ಆರೋಪಗಳು "ಸರಿ ಇಲ್ಲ, ಸುಳ್ಳು ಮತ್ತು ಅಸತ್ಯದಿಂದ ಕೂಡಿವೆ" ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದ ಸಂದೇಶಗಳು ಸರಪಳಿ ರೀತಿಯ ಪ್ರತಿಕ್ರಿಯೆ ಉಂಟು ಮಾಡುತ್ತವೆ. ಇದು ಇಂದಿನ ಸನ್ನಿವೇಶದಲ್ಲಿ ಅನಿಯಂತ್ರಿತ ಪರಮಾಣು ಸ್ಫೋಟಕ್ಕಿಂತ ಕಡಿಮೆ ಅಪಾಯಕಾರಿಯಲ್ಲ ಎಂದು ನ್ಯಾಯಾಲಯ ಬಣ್ಣಿಸಿದೆ.

ಲಕ್ಷ್ಮಿ ಅವರ ಹಣಕಾಸು ವ್ಯವಹಾರ ಕುರಿತಾಗಿಯಷ್ಟೇ ಅಲ್ಲದೆ ಅವರ ಪತಿ ಕೇಂದ್ರ ಸಚಿವರಾಗಿರುವ ಕಾರಣಕ್ಕೆ ಹಳೆಯ ಮತ್ತು ಮಹತ್ವವಲ್ಲದ ವಿಷಯವನ್ನು ಗೋಖಲೆ ಕೈಗೆತ್ತಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಗೋಖಲೆ ಅವರ ಟ್ವೀಟ್‌ಗಳು ಮಾನಹಾನಿಕರವಾಗಿದ್ದು ಲಕ್ಷ್ಮಿ ಅವರು ತಮ್ಮ ಪ್ರತಿಷ್ಠೆಗೆ ಧಕ್ಕೆ ಆಗುವಂತಹ ಕಾನೂನು ಹಾನಿ ಅನುಭವಿಸಿದ್ದಾರೆ. ಇದಕ್ಕೆ ಪರಿಹಾರ ದೊರೆಯಬೇಕಿದೆ ಎಂದು ಅದು ನುಡಿದಿದೆ.