ಶೀತಲೀಕೃತ ಭ್ರೂಣಗಳ ದತ್ತು ಪಡೆಯುವುದನ್ನು ನಿಷೇಧಿಸಿರುವ ಕಾಯಿದೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ [ಡಾ. ಅನಿರುದ್ಧ ನಾರಾಯಣ ಮಲ್ಪಾನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಇಂತಹ ನಿಷೇಧ ಸಂವಿಧಾನದ 14 ಮತ್ತು 21ನೇ ವಿಧಿಯಡಿ ದಂಪತಿಗಳಿಗೆ ಒದಗಿಸಿರುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಖ್ಯಾತ ಐವಿಎಫ್ ತಜ್ಞ ಡಾ. ಅನಿರುದ್ಧ ನಾರಾಯಣ ಮಲ್ಪಾನಿ ಸಲ್ಲಿಸಿರುವ ಪಿಐಎಲ್ ಹೇಳಿದೆ. ಅರ್ಜಿದಾರರನ್ನು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಪ್ರತಿನಿಧಿಸಿದ್ದರು.
ಆರು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 27ರಂದು ನಡೆಯಲಿದೆ.
ಅರ್ಜಿಯ ಪ್ರಮುಖಾಂಶಗಳು
ಸಹಾಯಕ ಪ್ರಜನನ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ- 2021 ಮತ್ತು ಅದರ ಕೆಲವು ಸೆಕ್ಷನ್‌ಗಳು ಈಗಾಗಲೇ ಶೀತಲೀಕರಿಸಿ ಸಂಗ್ರಹಿಸಿರುವ ಭ್ರೂಣಗಳನ್ನು ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ದಂಪತಿಗೆ ಉಚಿತವಾಗಿ, ಸ್ವಯಂ ಇಚ್ಛೆಯಿಂದ ಹಾಗೂ ಪರಸ್ಪರ ಒಪ್ಪಿಗೆಯೊಂದಿಗೆ ದಾನ ಮಾಡುವುದನ್ನು ಕೂಡ ನಿಷೇಧಿಸುತ್ತಿವೆ.
ಒಂದೆಡೆ ದ್ವಿತೀಯ ದಾನಿಗೆ ಐವಿಎಫ್‌ಗೆ ಅವಕಾಶ ನೀಡುತ್ತಾ ಮತ್ತೊಂದೆಡೆ ಭ್ರೂಣ ದತ್ತು ಪಡೆಯುವುದನ್ನು ನಿರಾಕರಿಸುತ್ತಾ ಒಂದೇ ಪರಿಸ್ಥಿತಿ ಎದುರಿಸುತ್ತಿರುವ ದಂಪತಿ ನಡುವೆ ತಾರತಮ್ಯ ಉಂಟು ಮಾಡಲಾಗುತ್ತಿದೆ.
ಪ್ರಸ್ತುತ ಕಾಯಿದೆಯ ಪ್ರಕಾರ ಐವಿಎಫ್ ಪ್ರಕ್ರಿಯೆಯಲ್ಲಿ ಸೃಷ್ಟಿಯಾದ ಸಾವಿರಾರು ಆರೋಗ್ಯಕರ ಭ್ರೂಣಗಳನ್ನು ಹತ್ತು ವರ್ಷಗಳ ಬಳಿಕ ಕಡ್ಡಾಯವಾಗಿ ನಾಶಪಡಿಸಬೇಕಾಗುತ್ತದೆ.
ದಾನ ಮಾಡಲು ಸಿದ್ಧರಾಗಿರುವ ದಂಪತಿಗಳು ಇದ್ದರೂ, ಅವುಗಳನ್ನು ಅಗತ್ಯವಿರುವ ದಂಪತಿಗಳಿಗೆ ನೀಡಲು ಅವಕಾಶ ಇಲ್ಲದಿರುವುದು ಪ್ರಜನನ ಸ್ವಾಯತ್ತತೆಯ ಮೇಲೆ ಅತಾರ್ಕಿಕ ನಿರ್ಬಂಧವಾಗಿದೆ.
ಮಗುವನ್ನು ಹೊಂದುವ ನಿರ್ಧಾರ ಸೇರಿದಂತೆ ಪ್ರಜನನ ಆಯ್ಕೆಗಳು, ವಿಧಿ 21ರ ಅಡಿಯಲ್ಲಿ ರಕ್ಷಿಸಲಾದ ಮೂಲಭೂತ ಹಕ್ಕುಗಳ ಅವಿಭಾಜ್ಯ ಅಂಗ.