Stop human trafficking  Unsplash
ಸುದ್ದಿಗಳು

ರಕ್ಷಣೆ ಪಡೆದಿದ್ದ ಅಪ್ರಾಪ್ತೆಯರು ಮತ್ತೆ ಮಾನವ ಕಳ್ಳಸಾಗಣೆದಾರರ ತೆಕ್ಕೆಗೆ: ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಲೈಂಗಿಕ ಕಳ್ಳಸಾಗಣೆ ಜಾಲವನ್ನು ಭೇದಿಸಿದ ನಂತರ, ಪೊಲೀಸರು ಯಾವುದೇ ತಪಾಸಣೆ ಇಲ್ಲದೆ ಹುಡುಗಿಯರನ್ನು ಅವರ ಪೋಷಕರಿಗೆ ಮರಳಿಸಿದ ಪರಿಣಾಮ ಅಪ್ರಾಪ್ತೆಯರು ಮತ್ತೆ ಕಳ್ಳಸಾಗಣೆಗೆ ತುತ್ತಾದರು ಎಂದು ಎರಡು ಎನ್‌ಜಿಒಗಳು ಆರೋಪಿಸಿವೆ

Bar & Bench

ವಾಣಿಜ್ಯ ಉದ್ದೇಶದ ಲೈಂಗಿಕ ಶೋಷಣೆ ಜಾಲದಿಂದ ರಕ್ಷಣೆ ಪಡೆದಿದ್ದ ಅಪ್ರಾಪ್ತೆಯರನ್ನು ಪೊಲೀಸರು ಸೂಕ್ತವಾಗಿ ನಿರ್ವಹಿಸದ ಪರಿಣಾಮ ಅವರು ಮತ್ತೆ ಲೈಂಗಿಕ ಶೋಷಣೆಯ ಜಾಲದ ಕಬಂಧ ಬಾಹುಗಳಿಗೆ ಸಿಲುಕಿದ್ದಾರೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು ಈ ಕುರಿತು ನ್ಯಾಯಾಲಯವು ದೆಹಲಿ ಪೊಲೀಸರಿಗೆ ನೋಟಿಸ್‌ ನೀಡಿದೆ [ಜಸ್ಟ್‌ ರೈಟ್ಸ್‌ ಫಾರ್‌ ಚಿಲ್ಡರ್ನ್‌ ಅಲಯನ್ಸ್‌ ಮತ್ತಿತರರು ಹಾಗೂ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪೊಲೀಸರ ವೈಫಲ್ಯವು ಹುಡುಗಿಯರನ್ನು ಮತ್ತೆ ಕಳ್ಳಸಾಗಣೆ ಮಾಡಲು ಕಾರಣವಾಯಿತೇ ಎಂಬ ಕುರಿತು ವಿವರಣೆ ನೀಡುವಂತೆ ನ್ಯಾ. ರವೀಂದರ್ ದುಡೇಜಾ ಪೊಲೀಸರಿಗೆ ಆದೇಶಿಸಿದರು. ಜುಲೈ 17 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಲೈಂಗಿಕ ಕಳ್ಳಸಾಗಣೆ ಜಾಲವನ್ನು ಭೇದಿಸಿದ ನಂತರ, ಪೊಲೀಸರು ಯಾವುದೇ ತಪಾಸಣೆ ಇಲ್ಲದೆ ಹುಡುಗಿಯರನ್ನು ಅವರ ಪೋಷಕರಿಗೆ ಮರಳಿಸಿದ ಪರಿಣಾಮ ಅಪ್ರಾಪ್ತೆಯರು ಮತ್ತೆ ಕಳ್ಳಸಾಗಣೆಗೆ ತುತ್ತಾದರು ಎಂದು ಎನ್‌ಜಿಒಗಳಾದ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಮತ್ತು ಅಸೋಸಿಯೇಷನ್ ​​ಫಾರ್ ವಾಲಂಟರಿ ಆಕ್ಷನ್ ಆರೋಪಿಸಿವೆ.

ದೂರಿನ ಪ್ರಮುಖ ಅಂಶಗಳು

  • ಬುರಾರಿ ಮತ್ತು ವಜೀರಾಬಾದ್‌ನಲ್ಲಿ ನಡೆದ ಲೈಂಗಿಕ ಜಾಲಗಳನ್ನು ಭೇದಿಸಲು ದೆಹಲಿ ಪೊಲೀಸರಿಗೆ ದಾಳಿ ನಡೆಸಲು ಎನ್‌ಜಿಒಗಳಾಗಿ ನಾವು ಸಹಾಯ ಮಾಡಿದ್ದೆವು.

  • ಬಾಲ ನ್ಯಾಯ ಕಾಯಿದೆ- 2015 ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆ- 1956 ರ ಪ್ರಕಾರ ಪೊಲೀಸರು ರಕ್ಷಣೆ ಪಡೆದ ಅಪ್ರಾಪ್ತೆಯರನ್ನು ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಲಿಲ್ಲ. ಬದಲಿಗೆ ವೈದ್ಯಕೀಯ ಪರೀಕ್ಷೆಯಿಲ್ಲದೆ ಅವರನ್ನು ʼಪೋಷಕರಿಗೆʼ ಮರಳಿಸಿದರು.

  • ಲೈಂಗಿಕ ಜಾಲ ನಡೆಸುತ್ತಿರುವವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ.

  • ಗಮನಾರ್ಹವಾಗಿ ವಜೀರಾಬಾದ್‌ನಲ್ಲಿ ರಕ್ಷಿಸಲಾದ ಅಪ್ರಾಪ್ತ ವಯಸ್ಕರಲ್ಲಿ ಒಬ್ಬಳು ಬುರಾರಿ ದಾಳಿಯಲ್ಲಿ ಪತ್ತೆಯಾಗಿದ್ದ ಹುಡುಗಿಯೇ ಆಗಿದ್ದಳು.

  • ಪೊಲೀಸರ ನಿಷ್ಕ್ರಿಯತೆ ಮತ್ತು ವೈಫಲ್ಯದಿಂದಾಗಿ ಲೈಂಗಿಕ ಕಳ್ಳಸಾಗಣೆದಾರರು ತಮ್ಮ ಕಬಂಧ ಬಾಹುಗಳನ್ನು ಬುರಾರಿಯಿಂದ ವಜೀರಾಬಾದ್‌ಗೂ ಚಾಚಿದರು.

  • ಇಂತಹ ಲೋಪಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಎನ್‌ಎಚ್‌ಆರ್‌ಸಿಗೆ ಅನುಗುಣವಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸಲು ನಿರ್ದೇಶಿಸಬೇಕು.

[ಆದೇಶದ ಪ್ರತಿ]

Just_Rights_For_Children_Alliance___Anr_vs_State_of_NCT_of_Delhi___Ors_.pdf
Preview