ಒಂದು ವರ್ಷದ ಬಾಲಕನ ಮೇಲೆ ಲೈಂಗಿಕ ಶೋಷಣೆ, ಕೊಲೆ: ಆರೋಪಿಗೆ ಮರಣ ದಂಡನೆ ವಿಧಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ

ನಿರ್ಜನ ಪ್ರದೇಶ ಗೊರಗುಂಟೆಪಾಳ್ಯದ ಏರ್‌ಫೋರ್ಸ್ ಆವರಣಕ್ಕೆ ಕರೆದೊಯ್ದು ಅನೈಸರ್ಗಿಕ ಸಂಭೋಗ ನಡೆಸಿದ್ದ ಆರೋಪಿಯು ಮಗು ಕಿರುಚಿಕೊಂಡಾಗ ಭಯಗೊಂಡು 40 ಕೆ ಜಿ ತೂಕದ ಸಿಮೆಂಟ್ ಮೌಲ್ಡ್ ಕಲ್ಲನ್ನು ಮಗುವಿನ ತಲೆ ಮೇಲೆ ಎತ್ತಿಹಾಕಿ ಹತ್ಯೆ ಮಾಡಿದ್ದ.
Death Sentence
Death Sentence

ಒಂದು ವರ್ಷದ ಬಾಲಕನ ಮೇಲೆ ಅನೈಸರ್ಗಿಕ ಸಂಭೋಗ ನಡೆಸಿ ಬರ್ಬರವಾಗಿ ಹತ್ಯೆಗೈದ ಆರೋಪಿಗೆ ಮರಣ ದಂಡನೆ ವಿಧಿಸಿ ಬೆಂಗಳೂರಿನ ತ್ವರಿತಗತಿ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಅಲಿಯಾಸ್ ಹಲ್ಲುಜ್ಜನಿಗೆ ನ್ಯಾಯಾಲಯವ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೇ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ ಎನ್ ರೂಪ ಅವರು ಮೂರ್ತಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ಅಡಿ (ಕೊಲೆ) ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.

ಐಪಿಸಿ ಸೆಕ್ಷನ್ 377 (ಅನೈಸರ್ಗಿಕ ಲೈಂಗಿಕ ಕ್ರಿಯೆ) ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ (ಪೋಕ್ಸೊ) ಸೆಕ್ಷನ್ 5 ಹಾಗೂ 6 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿರುವ ನ್ಯಾಯಾಲಯವು ಮೃತ ಬಾಲಕನ ಕುಟುಂಬಕ್ಕೆ ₹5,00,000 ಪರಿಹಾರ ನೀಡುವಂತೆ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

“ಪೋಕ್ಸೊ ಕಾಯಿದೆ 2012ರಲ್ಲಿ ಜಾರಿಗೆ ಬಂದಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇನ್ನೂ ಮಾತ್ರ ನಿಂತಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದ ಭವಿಷ್ಯವಾಗಿರುವ ಮಕ್ಕಳ ಮೇಲೆ ಕ್ರೂರತನ ಮರೆಯುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಇಲ್ಲವಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ” ಎಂದು ಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಮೃತ ಬಾಲಕನ ತಂದೆಗೆ ಆರೋಪಿ ಮೂರ್ತಿ ಪರಿಚಯವಿದ್ದರು. 2015ರ ಸೆಪ್ಟೆಂಬರ್‌ 12ರಂದು ಮಧ್ಯಾಹ್ನ 2 ಗಂಟೆ ಉಲ್ಲಾಸ್ ಚಿತ್ರಮಂದಿರ ಬಳಿ ಮೂರ್ತಿಗೆ ಮೃತ ಬಾಲಕ ಮತ್ತು ಆತನ ತಂದೆ ಸಿಕ್ಕಿದ್ದರು. ತುರ್ತು ಕೆಲಸದ ಹಿನ್ನೆಲೆಯಲ್ಲಿ ತಂದೆ, ಮೃತ ಬಾಲಕನನ್ನು ಆರೋಪಿ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಆರೋಪಿ, ಮಗುವನ್ನು ನಿರ್ಜನ ಪ್ರದೇಶ ಗೊರಗುಂಟೆಪಾಳ್ಯದ ಏರ್‌ಫೋರ್ಸ್ ಆವರಣಕ್ಕೆ ಕರೆದೊಯ್ದು ಅನೈಸರ್ಗಿಕ ಸಂಭೋಗ ನಡೆಸಿದ್ದ. ಇದರಿಂದ ಮಗು ಕಿರುಚುಕೊಂಡಾಗ ಭಯಭೀತನಾದ ಮೂರ್ತಿ, ಸ್ಥಳದಲ್ಲಿ ಬಿದ್ದಿದ್ದ 40 ಕೆ ಜಿ ತೂಕದ ಸಿಮೆಂಟ್ ಮೌಲ್ಡ್ ಕಲ್ಲನ್ನು ಮಗುವಿನ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ. ನಂತರ ಅಕ್ಕಪಕ್ಕ ಬಿದ್ದಿದ್ದ ಕಾಗದವನ್ನು ಮೃತದೇಹದ ಮೇಲೆ ಸುರಿದು, ಬೆಂಕಿ ಹಚ್ಚಿದ್ದನು.

ಪ್ರಕರಣ ಬೆಳಕಿಗೆ ಬಂದ ನಂತರ ರಾಜಗೋಪಾಲನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ್ದ ತ್ವರಿತಗತಿ ನ್ಯಾಯಾಲಯವು ಎಂಟು ಜನರ ಸಾಕ್ಷ್ಯ ಪರಿಗಣಿಸಿ ದೋಷಿಗೆ ಮರಣ ದಂಡನೆ ವಿಧಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ ಕೃಷ್ಣವೇಣಿ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com