BARC and Delhi High Court 
ಸುದ್ದಿಗಳು

ಬಾರ್ಕ್ ಸ್ವಾಧೀನ ಕೋರಿದ್ದ ಮನವಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಮಂಡಳಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ಭಾರತೀಯ ಮಾನಕ ಬ್ಯೂರೊ (ಬಿಐಎಸ್) ಕಾಯಿದೆ- 2016 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಪಾಲಿಸುವಂತಾಗಬೇಕು ಎಂದಿರುವ ಅರ್ಜಿ.

Bar & Bench

ಟೆಲಿವಿಷನ್‌ ವೀಕ್ಷಕರ ಮಾಪನದ ಅಂಕಿಅಂಶಗಳ ಹೊಣೆ ಹೊತ್ತಿರುವ ಟಿವಿ ವೀಕ್ಷಕರ ಸಂಶೋಧನಾ ಮಂಡಳಿಯನ್ನು (ಬಿಎಆರ್‌ಸಿ- ಬಾರ್ಕ್‌) ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಬುಧವಾರ ಕೇಂದ್ರ ಸರ್ಕಾರ ಮತ್ತು ಮಂಡಳಿಯ ಪ್ರತಿಕ್ರಿಯೆ ಕೇಳಿದೆ [ವೆಟರನ್ಸ್ ಫೋರಮ್ ಫಾರ್ ಟ್ರಾನ್ಸ್‌ಪರೆನ್ಸಿ ಇನ್ ಪಬ್ಲಿಕ್ ಲೈಫ್  ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ, ಭಾರತೀಯ ಮಾನಕ ಬ್ಯೂರೊ (ಬಿ ಐ ಎಸ್‌), ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರಗಳಿಂದ (ಟಿಆರ್‌ಎಐ- ಟ್ರಾಯ್‌) ಪ್ರತಿಕ್ರಿಯೆ ಕೇಳಿದೆ.

ಪ್ರತಿವಾದಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಿದ ಪೀಠ ಏಪ್ರಿಲ್ 28, 2023ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು. ವೆಟರನ್ಸ್ ಫೋರಮ್ ಫಾರ್ ಟ್ರಾನ್ಸ್‌ಪರೆನ್ಸಿ ಇನ್ ಪಬ್ಲಿಕ್ ಲೈಫ್ ಎಂಬ ಟ್ರಸ್ಟ್‌ ಸಲ್ಲಿಸಿರುವ ಅರ್ಜಿಯಲ್ಲಿ ಮಂಡಳಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ಭಾರತೀಯ ಮಾನಕ ಬ್ಯೂರೊ (ಬಿ ಐ ಎಸ್‌) ಕಾಯಿದೆ- 2016ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಪಾಲಿಸುವಂತಾಗಬೇಕು ಎಂದು ಕೋರಲಾಗಿದೆ.

ಶಿಕ್ಷಣ, ಆರೋಗ್ಯ, ಜಾಹೀರಾತು ಹಾಗೆಯೇ ಟೆಲಿವಿಷನ್‌  ವೀಕ್ಷಕರ ಮಾಪನದ ಕ್ಷೇತ್ರದಲ್ಲಿ ಕೂಡ ವಿವಿಧ ಪ್ರಕ್ರಿಯೆ ಮತ್ತು ಸೇವೆಗಳಿಗೆ ಮಾನದಂಡ ಅಭಿವೃದ್ಧಿಪಡಿಸುವುದಕ್ಕಾಗಿ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸುವಂತೆ ಕಾಯಿದೆ ಸೂಚಿಸುತ್ತದೆ. ಆದರೆ ಈ ಕಾರ್ಯಗಳನ್ನು ಅವ್ಯವಸ್ಥೆ ಮತ್ತು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಂಸ್ಥೆಗಳು ನಡೆಸುತ್ತಿವೆ. ಇದರಿಂದ ಸಾರ್ವಜನಿಕರು ಮತ್ತು ವೀಕ್ಷಕರ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಪಿಐಎಲ್‌ ವಾದಿಸಿದೆ.

ಇದೇ ವಿಚಾರವಾಗಿ ಈ ಹಿಂದೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆಗ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತ್ತು. ಆದರೆ ಈ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿ ದೂರಿದೆ.