ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟನ್ ಮೂಲದ ಕಾಮಗಾರಿ ವಾಹನಗಳ ತಯಾರಕ ಕಂಪೆನಿ ಜೆಸಿಬಿ ಮತ್ತು ಅದರ ಭಾರತೀಯ ಅಂಗಸಂಸ್ಥೆ ವಿರುದ್ಧ ಭಾರತದ ಸ್ಪರ್ಧಾ ಆಯೋಗ ಆರಂಭಿಸಿದ್ದ ತನಿಖೆಯನ್ನು ದೆಹಲಿ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಜೆಸಿಬಿ ಇಂಡಿಯಾ ಲಿಮಿಟೆಡ್ ಮತ್ತು ಸಿಸಿಐ ನಡುವಣ ಪ್ರಕರಣ]
ಸಿಸಿಐ ತನಿಖೆಗೆ ಆದೇಶಿಸಿದ್ದ ಮತ್ತು ಜೆಸಿಬಿ ವಿರುದ್ಧ ಸರ್ಚ್ ವಾರೆಂಟ್ ಹೊರಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಪ್ರತಿಬಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿತು.
ಟ್ರಾಕ್ಟರ್‌ಗಳು ಮತ್ತು ಟ್ರಾಕ್ಟರ್ ಭಾಗಗಳನ್ನು ತಯಾರಿಸುವ ಭಾರತೀಯ ಕಂಪನಿಯಾದ ಬುಲ್ ಮೆಷಿನ್ ಎಂಬ ಮಾಹಿತಿದಾರರು ಜೆಸಿಬಿಯೊಂದಿಗೆ ವ್ಯಾಜ್ಯ ಇತ್ಯರ್ಥಪಡಿಸಿಕೊಂಡು ಸಿಸಿಐನಿಂದ ದೂರನ್ನು ಹಿಂಪಡೆದಿದ್ದಾರೆ. ಹೀಗೆ ಪ್ರಕರಣ ಇತ್ಯರ್ಥವಾಗಿದ್ದರೂ ಜೆಸಿಬಿ ವಿರುದ್ಧದ ತನಿಖೆಯನ್ನು ಮುಂದುವರಿಸಿದ್ದಕ್ಕಾಗಿ ಸಿಸಿಐಯನ್ನು ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು,. ಶಾಸನಬದ್ಧ ಅಧಿಕಾರಿಗಳು ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಗೌರವಿಸಬೇಕು ಎಂದು ಅದು ನುಡಿಯಿತು.
ಸಿಸಿಐ ಹಾಗೆ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಗೌರವಿಸುವ ಮೂಲಕ ಅದು ಮಧ್ಯಸ್ಥಿಕೆ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಂತಾಗುವುದಲ್ಲದೆ, ಹಸ್ತಕ್ಷೇಪದ ಭಯವಿಲ್ಲದೆ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಪಕ್ಷಕಾರರನ್ನು ಪ್ರೋತ್ಸಾಹಿಸುವ ಕಾನೂನು ವ್ಯವಸ್ಥೆಯನ್ನು ಕೂಡ ಪೋಷಿಸಿದಂತಾಗುತ್ತದೆ ”ಎಂದು ನ್ಯಾಯಾಲಯ ಹೇಳಿದೆ.
“ಇತ್ಯರ್ಥಗೊಂಡ ಪ್ರಕರಣದ ವಿಚಾರಣೆಯನ್ನು ಸಿಸಿಐ ಮುಂದುವರೆಸಿದರೆ ಅದು ಇತ್ಯರ್ಥಕ್ಕೆ ಧಕ್ಕೆ ಉಂಟುಮಾಡಲಿದ್ದು ಮಧ್ಯಸ್ಥಿಕೆಯನ್ನು ಆಯ್ಕೆ ಮಾಡಿಕೊಳ್ಳದಂತೆ ಮತ್ತು ದುಬಾರಿ ಕಾನೂನುಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪಕ್ಷಕಾರರಲ್ಲಿ ಒತ್ತಡ ಉಂಟುಮಾಡಬಹುದು” ಎಂದು ಪೀಠ ಎಚ್ಚರಿಕೆ ನೀಡಿದೆ.
ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಹೊಂದಿರುವವರ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಹಕ್ಕುಗಳನ್ನು ಎತ್ತಿಹಿಡಿದ ನ್ಯಾಯಪೀಠ ಹೈಕೋರ್ಟ್ ಅಥವಾ ವಾಣಿಜ್ಯ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬೌದ್ಧಿಕ ಆಸ್ತಿ ವಿವಾದಗಳನ್ನು ಅತಿಕ್ರಮಿಸದಂತೆಯೂ ಸಿಸಿಐಗೆ ಗೆ ಎಚ್ಚರಿಕೆ ನೀಡಿತು.
ಜೆಸಿಬಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ. ವಿನ್ಯಾಸ ಉಲ್ಲಂಘನೆ, ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಪಾಸ್‌ಗಾಗಿ ಜೆಸಿಬಿ ದೆಹಲಿ ಹೈಕೋರ್ಟ್‌ನಲ್ಲಿ ಬುಲ್ ಮೆಷಿನ್ ವಿರುದ್ಧ ಮೊಕದ್ದಮೆ ಹೂಡಿತ್ತು.