Delhi 
ಸುದ್ದಿಗಳು

ದೆಹಲಿ ಪಾಲಿಕೆ ಸ್ಥಾಯಿ ಸಮಿತಿಗೆ ಹೊಸದಾಗಿ ಚುನಾವಣೆ: ಮೇಯರ್ ನಿರ್ಧಾರ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಎಂಸಿಡಿಯ ಸ್ಥಾಯಿ ಸಮಿತಿಗೆ ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಮೇಯರ್ ನಿರ್ಧಾರದ ವಿರುದ್ಧ ಬಿಜೆಪಿಯ ಇಬ್ಬರು ಪಾಲಿಕೆ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

Bar & Bench

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸ್ಥಾಯಿ ಸಮಿತಿಯ ಆರು ಸದಸ್ಯತ್ವಕ್ಕೆ ಹೊಸದಾಗಿ ಚುನಾವಣೆ ನಡೆಸಲು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಕೈಗೊಂಡಿದ್ದ ನಿರ್ಧಾರವನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಸದಸ್ಯರಲ್ಲಿ ಒಬ್ಬರ ಮತಪತ್ರವನ್ನು ತಿರಸ್ಕರಿಸುವ ಒಬೆರಾಯ್ ಅವರ ನಿರ್ಧಾರ ಕಾನೂನಿನ ಪ್ರಕಾರ ಕೆಟ್ಟದಾಗಿದ್ದು ನಿರ್ಧಾರಕ್ಕೆ ಯಾವುದೇ ಹುರುಳಿಲ್ಲ ಮತ್ತು ಆಕೆಯ ಕ್ರಮಕ್ಕೆ ಯಾವುದೇ ಅಧಿಕಾರ ಅಥವಾ ಅಧಿಕೃತತೆ ಇಲ್ಲ ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 24ಂದು ನಡೆದ ಮತದಾನದ ಆಧಾರದಲ್ಲಿಯೇ ಚುನಾವಣಾ ಫಲಿತಾಂಶ ಘೋಷಿಸಲು ಒಬೆರಾಯ್ ಅವರಿಗೆ ನ್ಯಾಯಾಲಯ ಈಗ ಆದೇಶಿಸಿದ್ದು ತಿರಸ್ಕೃತವಾದ ಮತವನ್ನು ಕೂಡ ಎಣಿಕೆ ಮಾಡಬೇಕು ಎಂದು ಏಕಸದಸ್ಯ ಪೀಠ ಹೇಳಿದೆ.

ಚುನಾವಣೆಯ ಫಲಿತಾಂಶ ಘೋಷಿಸಲು ಶೆಲ್ಲಿ ಒಬೆರಾಯ್‌ಗೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿಯ ಕೌನ್ಸಿಲರ್‌ಗಳಾದ ಕಮಲ್‌ಜೀತ್ ಶೆಹ್ರಾವತ್ ಮತ್ತು ಶಿಖಾ ರಾಯ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸ್ಥಾಯಿ ಸಮಿತಿ ಸದಸ್ಯರ ಮರುಚುನಾವಣೆ ಮಾಡುವಂತೆ ಮೇಯರ್ ನೀಡಿರುವ ನೋಟಿಸ್ ರದ್ದುಗೊಳಿಸುವಂತೆಯೂ ಅವರು ಒತ್ತಾಯಿಸಿದ್ದರು.

ಫೆಬ್ರವರಿ 25 ರಂದು ನೀಡಲಾದ ಮಧ್ಯಂತರ ಆದೇಶದಲ್ಲಿ, ಒಬೆರಾಯ್ ಅವರ ನಿರ್ದೇಶನಗಳಿಗೆ ನ್ಯಾಯಾಲಯ ತಡೆ ನೀಡಿತ್ತು.