ಕೆಂಪು ಕೋಟೆ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಆರು ತಿಂಗಳಲ್ಲಿ ಅದನ್ನು ಪೂರ್ಣಗೊಳಿಸಲು ಸಮಿತಿಯೊಂದನ್ನು ನೇಮಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ, ಇನ್ನೂ ಆರಂಭವಾಗದ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿಚಾರಣೆ ವರ್ಷಗಳಿಂದ ಬಾಕಿ ಉಳಿದಿದ್ದರೆ ಒಪ್ಪಬಹುದಿತ್ತು. ಆದರೆ ಇನ್ನೂ ವಿಚಾರಣೆಯೇ ಆರಂಭವಾಗಿಲ್ಲ ಎಂದ ಸಿಜೆ ಉಪಾಧ್ಯಾಯ ಅವರು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸಲು ಕೂಡ ಅರ್ಜಿದಾರರಾದ ವಿಫಲರಾಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ವಿಚಾರಣೆಗಳಿಗೆ ವರ್ಷಗಳು ಹಿಡಿದಿವೆ ಎನ್ನುತ್ತಿದ್ದೀರಿ. ಆದರೆ ಈ ಪ್ರಕರಣದ ವಿಚಾರಣೆಗೂ ಧೀರ್ಘಕಾಲ ಹಿಡಿಯುತ್ತದೆ ಎಂದು ನಾವು ಭಾವಿಸಬೇಕೆ? ನೀವು ತನಿಖೆ ಮೇಲ್ವಿಚಾರಣೆ, ಆರೋಪಪಟ್ಟಿ ಸಲ್ಲಿಕೆ ಬಯಸುತ್ತಿದ್ದೀರಿ, ನ್ಯಾಯಾಲಯ ಮೇಲ್ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದರು.
ನ್ಯಾಯಾಲಯದ ನಿರ್ದೇಶನಗಳು ಸ್ಫೋಟದ ಸಂತ್ರಸ್ತರಿಗೆ ಭರವಸೆ ನೀಡುತ್ತದೆ. ಹಿಂದೆ ಭಯೋತ್ಪಾದನಾ ಪ್ರಕರಣದ ವಿಚಾರಣೆಗಳು 25 ವರ್ಷಗಳ ಕಾಲ ನಡೆದಿವೆ. ಈ ಹಿಂದೆ ನಡೆದಿದ್ದ ಕೆಂಪು ಕೋಟೆ ಮೇಲಿನ ಉಗ್ರರ ದಾಳಿ ಪ್ರಕರಣದ ವಿಚಾರಣೆಗೂ ಏಳು ವರ್ಷ ಹಿಡಿದಿತ್ತು ಎಂದು ಅರ್ಜಿದಾರರ ಪರ ಹಾಜರಿದ್ದ ವಕೀಲರು ವಾದಿಸಿದರು.
ದೇಶದ ಸಾರ್ವಭೌಮಮತ್ವದ ಮೇಲೆ ನಡೆದ ದಾಳಿ ಇದಾಗಿದ್ದು ಸಂತ್ರಸ್ತರ ಕುಟುಂಬ ಕೂಡ ದಾಳಿಯ ಹಿಂದಿನ ಕಾರಣ ಹುಡುಕುತ್ತಿದೆ ಎಂದು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು.
ಪಿಐಎಲ್ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ವಾದ ಮಂಡಿಸಿದರು. ದೆಹಲಿ ಪೊಲೀಸರು ತನಿಖೆ ನಡೆಸುತ್ತಿಲ್ಲ ಈಗ ಪ್ರಕರಣ ಎನ್‌ಐಎ ಅಂಗಳದಲ್ಲಿದೆ ಎಂಬುದನ್ನು ಅರ್ಜಿದಾರರು ಪ್ರಸ್ತಾಪಿಸಿಲ್ಲ. ಪ್ರಕರಣ ಯುಎಪಿಎ ಕಾಯಿದೆ ವ್ಯಾಪ್ತಿಗೆ ಬರುತ್ತದೆ ಎಂದರು.
ಪಿಐಎಲ್ ಕುರಿತು ನಿರ್ದೇಶನ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದ ಬಳಿಕ ಅರ್ಜಿದಾರರಾದ ಮಾಜಿ ಶಾಸಕ ಡಾ. ಪಂಕಜ್ ಪುಷ್ಕರ್ ಮನವಿ ಹಿಂಪಡೆದರು.