Wikipedia, ANI 
ಸುದ್ದಿಗಳು

ಎಎನ್ಐ ಕುರಿತು ಮಾನಹಾನಿಕರ ವಿಚಾರ ಹಂಚಿಕೊಂಡವರ ಗುರುತು ಬಹಿರಂಗಪಡಿಸದ ವಿಕಿಪೀಡಿಯ: ದೆಹಲಿ ಹೈಕೋರ್ಟ್‌ನಿಂದ ತರಾಟೆ

ಎಎನ್ಐಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಉಲ್ಲೇಖಿಸುವ ಮೂಲಕ ವಿಕಿಪೀಡಿಯ ಮಾನಹಾನಿಕರ ಹೇಳಿಕೆ ಸೇರಿಸಲು ಅನುಮತಿಸಿದೆ ಎಂದು ಎಎನ್ಐ ಆರೋಪಿಸಿತ್ತು.

Bar & Bench

ಏಷ್ಯನ್‌ ನ್ಯೂಸ್‌ ಇಂಟರ್‌ನ್ಯಾಷನಲ್‌ (ಎಎನ್‌ಐ) ಸುದ್ದಿ ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಅದಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವಿಚಾರಗಳನ್ನು ಹಂಚಿಕೊಂಡವರ ಮಾಹಿತಿ ನೀಡದ ವಿಕಿಪೀಡಿಯಾದ ನಿಲುವಿಗೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠವೂ ಸೋಮವಾರ  ಅಸಮಾಧಾನ ವ್ಯಕ್ತಪಡಿಸಿದೆ.

ವಿಕಿಪೀಡಿಯಾ ಈ ನಿಲುವು ತೆಗೆದುಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯಡಿ ತಾನು ಕೇವಲ ಮಧ್ಯಸ್ಥ ವೇದಿಕೆ ಎಂದು ಇರುವ ರಕ್ಷಣೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು.

"ನೀವು ಸೇವಾ ಪೂರೈಕೆದಾರರು, ನಿಮ್ಮ ರಕ್ಷಣೆಗೆ ಸಂಬಂಧಿಸಿದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ. ಸುರಕ್ಷೆಯ ನೆಲೆಯನ್ನು ಕಳೆದುಕೊಳ್ಳುತ್ತಿದ್ದೀರಿ" ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.

ಪ್ರಕರಣದಲ್ಲಿ ಗಂಭೀರ ಆರೋಪಗಳಿವೆ ಎಂದಿರುವ ನ್ಯಾಯಾಲಯ ವಿಕಿಪೀಡಿಯಾ ಎಂಬ ವ್ಯವಸ್ಥೆ ಯಾರನ್ನಾದರೂ ಮಾನಹಾನಿ ಮಾಡುವ ಮುಸುಕಾಗಬಾರದು ಎಂದಿತು. ಬಳಕೆದಾರರನ್ನು ವಿಕಿಪೀಡಿಯಾ ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೆ ಅಂತಹ ಹೇಳಿಕೆ ವಿಕಿಪೀಡಿಯಾದ ಅಣತಿಯಂತೆ ನಡೆದಿದೆ ಎಂಬುದನ್ನು ತೋರಿಸುತ್ತದೆ. "ನೀವು ತೀವ್ರವಾಗಿ ತೊಡಗಿಕೊಂಡಿರುವುದು ಕಾಣಿಸುತ್ತಿದೆ, ನೀವು ಕೇವಲ ಮಧ್ಯಸ್ಥ ವೇದಿಕೆಯಲ್ಲ" ಎಂದು ಹೇಳಿತು.

 ಅಲ್ಲದೆ 'ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್ ವರ್ಸಸ್ ವಿಕಿಮೀಡಿಯಾ ಫೌಂಡೇಶನ್' ಎಂಬ ಶೀರ್ಷಿಕೆಯ ಪುಟವನ್ನು ಪ್ರಕಟಿಸಲು ವಿಕಿಪೀಡಿಯ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆಯೂ ನ್ಯಾಯಾಲಯ ತೀವ್ರವಾಗಿ ಆಕ್ಷೇಪಿಸಿತು. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ನೀವು ಕೆಲ ವಿವರಗಳನ್ನು ನೀಡುತ್ತಿದ್ದೀರಾ ಎಂದು ಅದು ಆಕ್ಷೇಪಿಸಿತು. ನಿಮ್ಮನ್ನು ನೀವು ಕಾನೂನಿನ ವ್ಯಾಪ್ತಿಯ ಹೊರಗಿದ್ದೀರಿ ಎಂದು ಭಾವಿಸಿದಂತಿದೆ ಎಂದು ಈ ವೇಳೆ ನ್ಯಾಯಾಲಯವು ಕಿಡಿಕಾರಿತು.

ಅಲ್ಲದೆ, ಮುಂದಿನ ವಿಚಾರಣೆಯ ವೇಳೆಗೆ ಈ ಕುರಿತಂತೆ ವಿಕಿಪೀಡಿಯಾದಿಂದ ಪ್ರತಿಕ್ರಿಯೆ ಪಡೆಯಲು ಅದರ ವಕೀಲರಿಗೆ ಸೂಚಿಸಿದ ನ್ಯಾಯಾಲಯ ಬುಧವಾರಕ್ಕೆ ಪ್ರಕರಣ ಮುಂದೂಡಿತು.

ಈ ಹಿಂದಿನ ವಿಚಾರಣೆ ವೇಳೆ ಕೂಡ ನ್ಯಾಯಾಲಯ ವಿಕಿಪೀಡಿಯಾವನ್ನು ತರಾಟೆಗೆ ತೆಗೆದುಕೊಂಡಿತ್ತು.

“ನ್ಯಾಯಾಂಗ ನಿಂದನೆ ಆದೇಶ ನೀಡಲಾಗುತ್ತಿದೆ. ನಿಮ್ಮ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸುವಂತೆ ಸರ್ಕಾರಕ್ಕೆ ಹೇಳಬೇಕಾದೀತು. ನೀವು ಈ ಮೊದಲು ಸಹ ಇದೇ ರೀತಿಯ ವಾದ ಮಂಡಿಸಿದ್ದಿರಿ. ನಿಮಗೆ ಭಾರತ ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ” ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ  ಅಸಮಾಧಾನ ವ್ಯಕ್ತಪಡಿಸಿದ್ದರು. 

ಅಲ್ಲದೆ ವಿಕಿಪೀಡಿಯಾದ ಅಧಿಕೃತ ಪ್ರತಿನಿಧಿಯೊಬ್ಬರು ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್‌ 25ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಿರಬೇಕೆಂದು ಪೀಠ ತಾಕೀತು ಮಾಡಿತ್ತು. ಜೊತೆಗೆ ತಾನು ನೀಡಿದ್ದ ಆದೇಶ ಪಾಲಿಸದ ಅದಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು.

ಹೀಗಾಗಿ ವಿಕಿಪೀಡಿಯಾ ವಿಭಾಗೀಯ ಪೀಠದ ಮೊರೆಹೋಗಿತ್ತು. ಇದೀಗ ವಿಭಾಗೀಯ ಪೀಠ ಕೂಡ ವಿಕಿಪೀಡಿಯಾಗೆ ಚಾಟಿ ಬೀಸಿದೆ.