ಸುದ್ದಿಗಳು

ʼಶೋಲೆʼ ಟ್ರೇಡ್‌ಮಾರ್ಕ್‌ ಉಲ್ಲಂಘನೆ: ಜಾಲತಾಣವೊಂದಕ್ಕೆ ₹ 25 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ವಿವಿಧ ತಲೆಮಾರುಗಳ ಭಾರತೀಯರನ್ನು ದಾಟಿ ಬಂದಿರುವ ಕಾರಣಕ್ಕೆ ಮೈಲಿಗಲ್ಲೆನಿಸುವ ಸಿನಿಮಾಗಳು ಟ್ರೇಡ್‌ಮಾರ್ಕ್‌ ಕಾನೂನಿನಡಿ ರಕ್ಷಣೆಗೆ ಅರ್ಹವಾಗಿವೆ ಎಂದ ನ್ಯಾಯಾಲಯ.

Bar & Bench

ಪ್ರಸಿದ್ಧ ನಟರಾದ ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ, ಹೇಮಾಮಾಲಿನಿ ನಟನೆಯ ಭಾರತೀಯ ಚಿತ್ರರಂಗದ ವಿಖ್ಯಾತ ʼಶೋಲೆʼ ಸಿನಿಮಾದ ಟ್ರೇಡ್‌ಮಾರ್ಕ್‌ (ವಾಣಿಜ್ಯ ಚಿಹ್ನೆ) ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಶೋಲೆ ಡಾಟ್‌ ಕಾಂ' ಜಾಲತಾಣಕ್ಕೆ ರೂ ₹25 ಲಕ್ಷ ದಂಡ ವಿಧಿಸಿ ದೆಹಲಿ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ [ಶೋಲೆ ಮೀಡಿಯಾ ಎಂಟರ್‌ಟೈನ್‌ಮೆಂಟ್‌ ಮತ್ತಿತರರು ಹಾಗೂ ಯೋಗೇಶ್‌ ಪಟೇಲ್‌ ಇನ್ನಿತರರ ನಡುವಣ ಪ್ರಕರಣ].

ಇದೇ ವೇಳೆ ವಾಣಿಜ್ಯ ಚಿಹ್ನೆಗಳ ಕಾನೂನಿನಡಿ ಚಿತ್ರವನ್ನು ನೋಂದಾಯಿಸಲಾಗದು ಎಂಬ ಪ್ರತಿವಾದಿಗಳ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ವಿವಿಧ ತಲೆಮಾರುಗಳ ಭಾರತೀಯರನ್ನು ದಾಟಿ ಬಂದಿರುವ ಕಾರಣ ವಾಣಿಜ್ಯ ಚಿಹ್ನೆ ಕಾನೂನಿನಡಿ ರಕ್ಷಣೆಗೆ ಮೈಲಿಗಲ್ಲೆನಿಸುವ ಸಿನಿಮಾಗಳು ಅರ್ಹವಾಗಿವೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ತೀರ್ಪು ನೀಡಿದರು.

ಕೆಲ ಚಲನಚಿತ್ರಗಳು ಸಾಮಾನ್ಯ ಪದಗಳ ಎಲ್ಲೆಯನ್ನು ಮೀರುತ್ತವೆ, ಶೋಲೆ ಅಂತಹ ಚಿತ್ರಗಳಲ್ಲೊಂದು. ಶೀರ್ಷಿಕೆಗಳು ಮತ್ತು ಸಿನಿಮಾಗಳು ಟ್ರೇಡ್‌ಮಾರ್ಕ್‌ ಕಾನೂನಡಿ ಗುರುತಿಸಿಕೊಳ್ಳಲು ಅರ್ಹವಾಗಿದ್ದು ಶೋಲೆ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿದೆ” ಎಂದ ನ್ಯಾಯಾಲಯ 1975ರಲ್ಲಿ ಮೂಡಿ ಬಂದ ಚಿತ್ರದ ಲೋಗೊ, ವಿನ್ಯಾಸ ಹಾಗೂ ಡಿವಿಡಿಗಳನ್ನು ಮಾರದಂತೆ ಜಾಲತಾಣಕ್ಕೆ ನಿರ್ಬಂಧ ವಿಧಿಸಿತು. ಅಲ್ಲದೆ ಶೋಲೆಯನ್ನು ಯಾವುದೇ ರೂಪದಲ್ಲಿ ಬಳಸಬಾರದು ಮತ್ತು ಸೋರ್ಸ್‌ ಕೋಡ್‌ನಲ್ಲಿ ಅದನ್ನು ಮೆಟಾ ಟ್ಯಾಗ್‌ ಆಗಿ ಬಳಸಕೂಡದು ಎಂದು ಕೂಡ ತಾಕೀತು ಮಾಡಿತು.

ಅಕ್ರಮವಾಗಿ ಸಿನಿಮಾ ಹೆಸರು ಬಳಸುತ್ತಿದ್ದು ಚಲನಚಿತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವುದನ್ನು ಪ್ರಶ್ನಿಸಿ ಜಾಲತಾಣ ಮತ್ತು ನಿಯತಕಾಲಿಕೆ ವಿರುದ್ಧ ಶೋಲೆ ಮೀಡಿಯಾ ಎಂಟರ್‌ಟೈನ್‌ಮೆಂಟ್‌ ದಾವೆ ಹೂಡಿತ್ತು.