2023ರ ತಮಿಳು ಚಿತ್ರ ಪೊನ್ನಿಯಿನ್ ಸೆಲ್ವನ್- 2 ರ 'ವೀರ ರಾಜ ವೀರ' ಹಾಡಿನ ಸಂಯೋಜನೆಯ ಕುರಿತು ಸಲ್ಲಿಸಲಾದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ವಿರುದ್ಧ ಏಕ ಸದಸ್ಯ ಪೀಠ ಹೊರಡಿಸಿದ್ದ ಮಧ್ಯಂತರ ತಡೆಯಾಜ್ಞೆಗೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ತಮ್ಮ ತಂದೆ ನಾಸಿರ್ ಫೈಯಾಜುದ್ದೀನ್ ದಾಗರ್ ಮತ್ತು ಚಿಕ್ಕಪ್ಪ ಜಹಿರುದ್ದೀನ್ ದಾಗರ್ ಸಂಯೋಜಿಸಿದ 'ಶಿವ ಸ್ತುತಿ' ಹಾಡನ್ನು ನಕಲು ಮಾಡಿ ಸಂಗೀತ ಸಂಯೋಜಿಸಲಾಗಿದೆ ಎಂದು ಆರೋಪಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತೀಯ ಶಾಸ್ತ್ರೀಯ ಸಂಗೀತಗಾರ ಫೈಯಾಜ್ ವಾಸಿಫುದ್ದೀನ್ ದಾಗರ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿಯ ಪರವಾಗಿ ಏಪ್ರಿಲ್ 25ರಂದು ಹೈಕೋರ್ಟ್ ಏಕ ಸದಸ್ಯ ಪೀಠ ದಾಗರ್ ಅವರ ಮಧ್ಯಂತರ ತಡೆಯಾಜ್ಞೆ ಅರ್ಜಿಯ ಪರವಾಗಿ ತೀರ್ಪು ನೀಡಿತ್ತು. ಎಲ್ಲಾ ಆನ್‌ಲೈನ್ ವೇದಿಕೆಗಳಲ್ಲಿ ದಾಗರ್ ಸಹೋದರರ ಹೆಸರು ಉಲ್ಲೇಖಿಸುವಂತೆ ರೆಹಮಾನ್ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಅದು ನಿರ್ದೇಶನ ನೀಡಿತ್ತು. ಜೊತೆಗೆ ₹2 ಲಕ್ಷ ದಂಡ ವಿಧಿಸಿದ್ದ ನ್ಯಾಯಾಲಯ ರೆಹಮಾನ್ ಮತ್ತು ನಿರ್ಮಾಪಕರು ₹2 ಕೋಟಿ ಠೇವಣಿ ಇಡಬೇಕೆಂದು ತಾಕೀತು ಮಾಡಿತ್ತು. ಇದನ್ನು ಪ್ರಶ್ನಿಸಿ ರೆಹಮಾನ್ ಮೇಲ್ಮನವಿ ಸಲ್ಲಿಸಿದ್ದರು.
ರೆಹಮಾನ್ ಅವರ ಮೇಲ್ಮನವಿಯನ್ನು ಮೇ 23ರಂದು ಇತ್ಯರ್ಥಪಡಿಸುವುದಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಅಜಯ್ ದಿಗ್ಪಾಲ್ ಅವರಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು.
ರೆಹಮಾನ್ ಮತ್ತು ನಿರ್ಮಾಪಕರಿಗೆ ವಿಧಿಸಿದ್ದ ದಂಡದ ಆದೇಶಕ್ಕೂ ಪೀಠ ತಡೆ ನೀಡಿದೆ. ಆದರೆ ಏಕಸದಸ್ಯ ಪೀಠ ಸೂಚಿಸಿರುವಂತೆ ₹2 ಕೋಟಿ ಮೊತ್ತವನ್ನು ಠೇವಣಿ ಇಡುವಂತೆ ಅದು ನಿರ್ದೇಶಿಸಿತು. ಮೇಲ್ಮನವಿಯ ಅರ್ಹತೆಯನ್ನಾಧರಿಸಿ ಠೇವಣಿ ಇಡಲು ಸೂಚಿಸುತ್ತಿಲ್ಲ ಎಂದೂ ಅದು ಇದೇ ವೇಳೆ ಸ್ಪಷ್ಟಪಡಿಸಿದೆ.
'ವೀರ ರಾಜ ವೀರ' ಹಾಡಿನ ಸಾಹಿತ್ಯ ವಿಭಿನ್ನವಾಗಿದ್ದರೂ, ಅದರ ತಾಳ , ಬೀಟ್ ಮತ್ತು ಸಂಗೀತ ರಚನೆಯು 'ಶಿವ ಸ್ತುತಿ' ಹಾಡಿನಂತೆಯೇ ಇದೆ ಎಂದು ದಾಗರ್ ಆರೋಪಿಸಿದ್ದರು. ದಾಗರ್ ಸಹೋದರರು ಜಾಗತಿಕವಾಗಿ ಪ್ರದರ್ಶಿಸಿದ್ದ 'ಶಿವ ಸ್ತುತಿ' ಹಾಡು ಪ್ಯಾನ್ ರೆಕಾರ್ಡ್ಸ್ ಬಿಡುಗಡೆ ಮಾಡಿದ ಆಲ್ಬಮ್‌ಗಳಲ್ಲಿ ಸ್ಥಾನ ಪಡೆದಿತ್ತು.
ಆದರೆ, ನಕಲು ಆರೋಪಗಳನ್ನು ರೆಹಮಾನ್ ನಿರಾಕರಿಸಿದ್ದರು. 'ಶಿವ ಸ್ತುತಿ' ದ್ರುಪದ್ ಪ್ರಕಾರದ ಸಾಂಪ್ರದಾಯಿಕ ಸಂಯೋಜನೆಯಾಗಿದ್ದುಅದನ್ನು ಸಾರ್ವತ್ರಿಕವಾಗಿ ಬಳಸಿಕೊಳ್ಳಬಹುದಾಗಿದೆ. 'ವೀರ ರಾಜ ವೀರ' ಹಾಡು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಪ್ರದಾಯಗಳನ್ನು ಮೀರಿ 227 ವಿಭಿನ್ನ ಸ್ತರಗಳನ್ನು ಹೊಂದಿರುವ ಪಾಶ್ಚಾತ್ಯ ಸಂಗೀತದ ಮೂಲಭೂತ ಅಂಶಗಳನ್ನು ಬಳಸಿಕೊಂಡು ರಚಿಸಲಾದ ಮೂಲ ಕೃತಿಯಾಗಿದೆ ಎಂದು ಅವರು ಹೇಳಿದ್ದರು.