Amazon Warehouse  
ಸುದ್ದಿಗಳು

ವಾಣಿಜ್ಯ ಚಿಹ್ನೆ ವಿವಾದ: ಅಮೆಜಾನ್ ₹340 ಕೋಟಿ ಪರಿಹಾರ ಪಾವತಿಸಬೇಕೆಂಬ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ತನ್ನ ʼಬೆವರ್ಲಿ ಹಿಲ್ಸ್ ಪೋಲೊ ಕ್ಲಬ್ʼ ವಾಣಿಜ್ಯಚಿಹ್ನೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಅಮೆಜಾನ್ ಟೆಕ್ನಾಲಜೀಸ್ ಮತ್ತಿತರರ ವಿರುದ್ಧ 2020ರಲ್ಲಿ, ಲೈಫ್‌ಸ್ಟೈಲ್‌ ಈಕ್ವಿಟೀಸ್ ಮೊಕದ್ದಮೆ ಹೂಡಿತ್ತು.

Bar & Bench

ʼಬೆವರ್ಲಿ ಹಿಲ್ಸ್ ಪೋಲೊ ಕ್ಲಬ್ʼ  ವಾಣಿಜ್ಯ ಚಿಹ್ನೆ ಉಲ್ಲಂಘನೆ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ಧಉಡುಪು ತಯಾರಿಕೆ ಕಂಪೆನಿ ಲೈಫ್‌ಸ್ಟೈಲ್‌ ಈಕ್ವಿಟೀಸ್‌ಗೆ ಅಮೆಜಾನ್‌ ಟೆಕ್ನಾಲಜೀಸ್‌ ₹340 ಕೋಟಿ ಪರಿಹಾರ ನೀಡಬೇಕು ಎಂದು ಏಕಸದಸ್ಯ ಪೀಠ ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಮಂಗಳವಾರ ತಡೆ ವಿಧಿಸಿದೆ.

ತಡೆಯಾಜ್ಞೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಹಣ ಠೇವಣಿ ಇಡಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಹರಿಶಂಕರ್ ಮತ್ತು ಅಜಯ್ ದಿಗ್ಪಾಲ್ ಅವರಿದ್ದ ಪೀಠ ಇದೇ ವೇಳೆ ತಿಳಿಸಿತು.

ಅಂತಿಮ ತೀರ್ಪಿನ ವೇಳೆ ಅಮೆಜಾನ್‌ ವಿರುದ್ಧವಾಗಿ ಆದೇಶ ಬಂದರೆ ಅಮೆಜಾನ್‌ ಪರಿಹಾರ ನೀಡುವ ಮುಚ್ಚಳಿಕೆ ಬರೆದುಕೊಡಬೇಕೆಂದು ನ್ಯಾಯಾಲಯ ನಿರ್ದೇಶಿಸಿತು. ಅಲ್ಲದೆ ತಾನು ಈಗ ನೀಡಿರುವ ಆದೇಶ ಅಂತಿಮ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಅಮೆಜಾನ್‌ ಟೆಕ್ನಾಲಜೀಸ್‌ ಸಿಂಬಲ್‌ ಎಂಬ ಬ್ರ್ಯಾಂಡ್‌ ಅಡಿ ತನ್ನ ವಾಣಿಜ್ಯ ಚಿಹ್ನೆ ಇರುವ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದು ಅಮೆಜಾನ್‌ ಡಾಟ್‌ ಇನ್‌ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲೌಡ್‌ಟೇಲ್‌ ಇಂಡಿಯಾ ಕೂಡ ಈ ಆಕ್ಷೇಪಾರ್ಹ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಂಡಿದೆ ಎಂದು ದೂರಲಾಗಿತ್ತು.

ಅಮೆಜಾನ್ ಮತ್ತಿತರರು ವಿವಾದಿತ ಲೋಗೋ ಬಳಸದಂತೆ ಹೈಕೋರ್ಟ್ ಅಕ್ಟೋಬರ್ 12, 2020ರಲ್ಲಿ ಮಧ್ಯಂತರ ತಡಯಾಜ್ಞೆ ನೀಡಿತ್ತು. ತನ್ನ ಜಾಲತಾಣಗಳಿಂದ ಅಂತಹ ಉತ್ಪನ್ನಗಳನ್ನು ತೆಗೆದುಹಾಕುವಂತೆಯೂ ಅಮೆಜಾನ್‌ಗೆ ನಿರ್ದೇಶಿಸಿತ್ತು. ಬಳಿಕ ಅಮೆಜಾನ್ ಟೆಕ್ನಾಲಜೀಸ್ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಏಕಪಕ್ಷೀಯವಾಗಿ ವಿಚಾರಣೆ ನಡೆದಿತ್ತು.

ನಂತರ ಮಧ್ಯಂತರ ತಡೆಯಾಜ್ಞೆಯನ್ನು ಅಖೈರುಗೊಳಿಸಲಾಯಿತು. 2023ರಲ್ಲಿ, ಕ್ಲೌಡ್‌ಟೇಲ್‌ ಇಂಡಿಯಾ  2015ರಿಂದ ಜುಲೈ 2020ರವರೆಗೆ ತಾನು ವಿವಾದಿತ ವಾಣಿಜ್ಯ ಚಿಹ್ನೆಯನ್ನು ಬಳಸಿರುವುದಾಗಿ ಉಪ್ಪಿಕೊಂಡಿತು. ವಿವಾದಿತ ಉತ್ಪನ್ನಗಳಿಂದ ₹23,92,420 ಆದಾಯ ಮತ್ತು ಸರಿಸುಮಾರು 20%ರಷ್ಟು ಲಾಭವಾಗಿದ್ದಾಗಿ ತಿಳಿಸಿತು.

ಯಾವುದೇ ಉಲ್ಲಂಘನೆಗೆ ಕ್ಲೌಡ್‌ಟೇಲ್‌ ಅನ್ನು ಅಮೆಜಾನ್‌ ಹೊಣೆ ಮಾಡುತ್ತಿದೆ. ಆದರೆ ಬ್ರ್ಯಾಂಡ್‌ ಪರವಾನಗಿ ಮತ್ತು ವಿತರಣಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆಜಾನ್‌ ಕಂಪೆನಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕ್ಲೌಡ್‌ಟೇಲ್‌ ಪರ ವಕೀಲರು ವಾದಿಸಿದ್ದರು. ಆದರೆ ವಾಣಿಜ್ಯ ಚಿಹ್ನೆ ಉಲ್ಲಂಘನೆ ಈ ಒಪ್ಪಂದದ ಭಾಗವಲ್ಲ. ಅಮೆಜಾನ್ ಮತ್ತು ಕ್ಲೌಡ್‌ಟೇಲ್‌ ಎರಡನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಲೈಫ್‌ಸ್ಟೈಲ್‌ ವಾದಿಸಿತ್ತು.