ಜನಪ್ರಿಯ ವಸ್ತ್ರ ವಿನ್ಯಾಸಕ ರಾಹುಲ್ ಮಿಶ್ರಾ ಮತ್ತು ಅವರ ಕಂಪನಿ ವಿನ್ಯಾಸಗೊಳಿಸಿದ್ದ ಉಡುಪುಗಳ ಪ್ರತಿಕೃತಿ ಮಾರಾಟ ಮಾಡುತ್ತಿದ್ದ ಜಾಲತಾಣದ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಅಪರಿಚಿತ ಪ್ರತಿವಾದಿಗೆ ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ [ರಾಹುಲ್ ಮಿಶ್ರಾ ಮತ್ತು ಅಪರಿಚಿತ ಪ್ರತಿವಾದಿ ನಡುವಣ ಪ್ರಕರಣ].
'ರಾಹುಲ್ ಮಿಶ್ರಾ' ಅಥವಾ ಅದನ್ನು ಹೋಲುವ ವಾಣಿಜ್ಯ ಚಿಹ್ನೆ ಬಳಸದಂತೆ ʼwww.rahudress.com' ಜಾಲತಾಣ ನಿರ್ವಹಿಸುವ ಅಪರಿಚಿತ ಪ್ರತಿವಾದಿಗೆ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ನಿರ್ಬಂಧ ವಿಧಿಸಿದರು.
" ಪ್ರತಿವಾದಿ ನಂ.2 ಡಿಎನ್‌ಆರ್ ತಕ್ಷಣವೇ 'www.rahudress.com' ಡೊಮೇನ್ ಹೆಸರನ್ನು ಸ್ಥಗಿತಗೊಳಿಸಿ ಅಮಾನತಿನಲ್ಲಿರಿಸಬೇಕು. ಜೊತೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಪ್ರತಿವಾದಿ ನಂ.2 ಕೂಡ ತನಗೆ ಲಭ್ಯವಿರುವ ಸಂಪೂರ್ಣ ವಿವರಗಳನ್ನು ಫಿರ್ಯಾದಿಗಳಿಗೆ ಬಹಿರಂಗಪಡಿಸಬೇಕು (ಉದಾಹರಣೆಗೆ: ಹೆಸರು, ವಿಳಾಸ , ಪ್ರತಿವಾದಿ ನಂ.1 ರ ಇಮೇಲ್ ವಿಳಾಸ, ಫೋನ್ ಸಂಖ್ಯೆ, ಐಪಿ ವಿಳಾಸ ಇತ್ಯಾದಿ)" ಎಂದು ನ್ಯಾಯಾಲಯ ಆದೇಶಿಸಿದೆ.
ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ಒಳಗೊಂಡಿರುವ ದಾವೆಗಳಲ್ಲಿ ನಿಯಮ ಉಲ್ಲಂಘಿಸುವ ಪಕ್ಷಕಾರರನ್ನು ಪತ್ತೆಹಚ್ಚಲು ಪ್ರಾಯೋಗಿಕವಾಗಿ ಅಸಾಧ್ಯವಾದಾಗ ಅಂತಹ ಅಪರಿಚಿತ ಪ್ರತಿವಾದಿಗಳ ವಿರುದ್ಧ ಸಾಮಾನ್ಯವಾಗಿ ಅನಾಮಿಕ ಆದೇಶ (ಜಾನ್ ಡೋ ಆದೇಶ) ನೀಡಲಾಗುತ್ತದೆ.
ಮೇಲ್ನೋಟಕ್ಕೆ ಪ್ರಕರಣ ಸಾಬೀತಾಗಿರುವುದರಿಂದ ಮಿಶ್ರಾ ಪರವಾಗಿ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಾಯಿತು ಎಂದು ನ್ಯಾಯಾಲಯ ತಿಳಿಸಿದೆ.
ತಮ್ಮ ಹೆಸರಿನಲ್ಲಿ ನಕಲಿ ಉಡುಪುಗಳನ್ನು ಮಾರಾಟ ಮಾಡುತ್ತಿರುವ ಜಾಲತಾಣದ ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಿ ವಸ್ತ್ರ ವಿನ್ಯಾಸಕ ಮಿಶ್ರಾ ಮೊಕದ್ದಮೆ ಹೂಡಿದ್ದರು. ಪ್ರಕರಣದ ಮುಂದಿನ ವಿಚಾರಣೆ 2025ರ ಏಪ್ರಿಲ್‌ನಲ್ಲಿ ನಡೆಯಲಿದೆ.