Salman Khan with Delhi High Court 
ಸುದ್ದಿಗಳು

ವ್ಯಕ್ತಿತ್ವ ಹಕ್ಕು:‌ ವಾಣಿಜ್ಯ ಚಟುವಟಿಕೆ, ಉತ್ಪನ್ನಗಳಿಗೆ ಅಕ್ರಮವಾಗಿ ನಟ ಸಲ್ಮಾನ್‌ ಖಾನ್ ಹೆಸರಿನ ಬಳಕೆಗೆ ತಡೆ

ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಇಂದು ಪ್ರಕರಣದ ವಿಚಾರಣೆ ನಡೆಸಿದರು.

Bar & Bench

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ಆರೋಪದ ಮೇಲೆ ದಾಖಲಿಸಿದ್ದ ದೂರಿನ ಸಂಬಂದ ಅಗತ್ಯ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಸಾಮಾಜಿಕ ಮಾಧ್ಯಮಗಳು ಹಾಗೂ ಮಧ್ಯಸ್ಥವೇದಿಕೆಗಳಿಗೆ ಸೂಚಿಸಿದೆ [ಸಲ್ಮಾನ್ ಖಾನ್ ವಿರುದ್ಧ ಅಶೋಕ್ ಕುಮಾರ್/ಜಾನ್ ಡೋ & ಅದರ್ಸ್].

ಸಲ್ಮಾನ್ ಖಾನ್ ಅವರ ಹೆಸರು, ಫೋಟೋಗಳು ಮತ್ತು ಅವರ ವ್ಯಕ್ತಿತ್ವದ ಇತರ ಗುಣಚರ್ಯೆಗಳನ್ನು ವಾಣಿಜ್ಯ ಸರಕುಗಳ ಮಾರಾಟಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರತಿವಾದಿಗಳ ವಿರುದ್ಧ ಸ್ವತಃ ತಡೆಯಾಜ್ಞೆಗಳನ್ನು ನೀಡುವುದಾಗಿ ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಹೇಳಿದರು.

"ಐಟಿ ಮಧ್ಯಸ್ಥವೇದಿಕೆಗಳ ನಿಯಮಗಳ ಅಡಿಯಲ್ಲಿ ದೂರುದಾರರ ದೂರನ್ನು ಪರಿಗಣಿಸಲು 2, 4, 6ನೇ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದೆ. 3 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಲಾದ 2ನೇ ಪ್ರತಿವಾದಿ ತನ್ನ ನಿರ್ಧಾರ ತೆಗೆದುಕೊಳ್ಳುವ ಮೊದಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪರಿಗಣಿಸಲು ನಿರ್ದೇಶಿಸಲಾಗಿದೆ. ವಾಣಿಜ್ಯ ಉತ್ಪನ್ನಗಳ ಮೇಲಿನ ಪ್ರತಿವಾದಿಗಳಿಗೆ ನಾನು ತಡೆಯಾಜ್ಞೆಗಳನ್ನು ನೀಡುತ್ತೇನೆ" ಎಂದು ನ್ಯಾಯಪೀಠ ಹೇಳಿದೆ.

ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಅನಾಮಧೇಯ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ತಮ್ಮ ವ್ಯಕ್ತಿತ್ವ ಹಕ್ಕನ್ನು ಅನಧಿಕೃತವಾಗಿ ಬಳಸದಂತೆ ತಡೆಯಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಸಲ್ಮಾನ್‌ ಖಾನ್‌ ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವ ಗುಣಲಕ್ಷಣಗಳನ್ನು ವಾಣಿಜ್ಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನ್ಯಾಯಾಲಯಗಳ ಮೊರೆ ಹೋಗಿರುವ ಖ್ಯಾತನಾಮರ ಸುದೀರ್ಘ ಪಟ್ಟಿಗೆ ಈ ಹಿರಿಯ ನಟ ಸೇರಿದ್ದಾರೆ.

ಈ ಹಿಂದೆ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್,  ಐಶ್ವರ್ಯ ರೈ ಬಚ್ಚನ್,  ಅಭಿಷೇಕ್ ಬಚ್ಚನ್,  ನಾಗಾರ್ಜುನ,  ಅನಿಲ್ ಕಪೂರ್, ಜಾಕಿ ಶ್ರಾಫ್, ಕರಣ್ ಜೋಹರ್, ಆಧ್ಯಾತ್ಮಿಕ ಗುರುಗಳಾದ ಶ್ರೀ ರವಿಶಂಕರ್‌,  ಜಗ್ಗಿ ವಾಸುದೇವ್ ಮತ್ತಿತರರು  ವ್ಯಕ್ತಿತ್ವ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ಇದಾಗಲೇ ರಕ್ಷಣೆ ನೀಡಿದೆ.