ಚೀನಾ ವೀಸಾ ಹಗರಣ ಮತ್ತು ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣಗಳಲ್ಲಿನ ವಾದಗಳ ವಿಚಾರಣೆಯನ್ನು ಮುಂದೂಡುವಂತೆ ದೆಹಲಿ ಹೈಕೋರ್ಟ್ ಈಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ತಾನು ಮೇ 29, 2025 ರ ನಂತರ ಮನವಿಯ ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಪ್ರಕರಣ ಮುಂದೂಡುವಂತೆ ನ್ಯಾಯಮೂರ್ತಿ ರವೀಂದರ್ ದುಡೇಜಾ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದರು. ವಿಚಾರಣಾ ನ್ಯಾಯಾಲಯ ಈ ಮೊದಲು ಪ್ರಕರಣವನ್ನು ಏಪ್ರಿಲ್ 15 ರಂದು ವಿಚಾರಣೆ ನಡೆಸಲು ನಿರ್ಧರಿಸಿತ್ತು.
ಚೀನೀ ವೀಸಾ ಹಗರಣ ಮತ್ತು ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಗಳಲ್ಲಿ ವಾದಗಳ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ಮಾರ್ಚ್ 28 ರಂದು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಾರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹದಿನಾಲ್ಕು ವರ್ಷಗಳ ಹಿಂದೆ ಅಂದರೆ 2011ರಲ್ಲಿ 263 ಚೀನೀ ಪ್ರಜೆಗಳಿಗೆ ವೀಸಾ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಕಾರ್ತಿ ಚಿದಂಬರಂ ಮತ್ತಿತರರ ವಿರುದ್ಧ ದಾಖಲಾದ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿದೆ. ಹಗರಣ ನಡೆದ ಅವಧಿಯಲ್ಲಿ ಕಾರ್ತಿ ಅವರ ತಂದೆ ಪಿ ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದರು.
ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ (ಎಫ್‌ಐಪಿಬಿ) ಅನುಮತಿ ನೀಡುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. ಪಿ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದಾಗ 2006ರಲ್ಲಿ ಹಗರಣ ನಡೆದಿದ್ದು ಅದಕ್ಕೆ ಪ್ರತಿಯಾಗಿ ಲಾಭ ಪಡೆಯಲಾಗಿತ್ತು ಎಂದು ಆರೋಪಿಸಲಾಗಿತ್ತು.