ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಗೆ ಬರುವ ರೋಗಿಗಳ ಕುಟುಂಬ ಸದಸ್ಯರಿಗೆ ವಾಸ್ತವ್ಯ ಕಲ್ಪಿಸುವ ಸಲುವಾಗಿ ಏಮ್ಸ್ ನಿರ್ಮಿಸಲು ಆಲೋಚಿಸಿರುವ 3,000 ಹಾಸಿಗೆ ಸೌಕರ್ಯ ಇರುವ ರಾತ್ರಿ ಆಶ್ರಯ ಕೇಂದ್ರಕ್ಕೆ ಧನಸಹಾಯ ಮಾಡುವಂತೆ ದೆಹಲಿ ಹೈಕೋರ್ಟ್ ವಕೀಲರ ಸಂಘಕ್ಕೆ ದೆಹಲಿ ಉಚ್ಚ ನ್ಯಾಯಾಲಯ ಶುಕ್ರವಾರ ಸಲಹೆ ನೀಡಿತು.
ಈ ಸಂಬಂಧ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಹಿಂದೆಯೂ ವಕೀಲರು ಅನೇಕ ಸಾರ್ವಜನಿಕ ಉದ್ದೇಶಗಳಿಗೆ ಕೊಡುಗೆ ನೀಡಿದಂತೆ ಈ ಯೋಜನೆಗೂ ಸಹಕರಿಸುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿತು.
ತೀವ್ರ ಶೀತ ಗಾಳಿಯಿಂದ ತತ್ತರಿಸಿರುವ ದೆಹಲಿಯಲ್ಲಿನ ರಾತ್ರಿ ಆಶ್ರಯ ಕೇಂದ್ರಗಳಲ್ಲಿ ಸ್ಥಳಾವಕಾಶ ಮತ್ತು ಸೌಲಭ್ಯದ ಕೊರತೆ ಇರುವ ಹಿನ್ನೆಲೆಯಲ್ಲಿ ಪತ್ರಿಕಾ ವರದಿ ಆಧರಿಸಿ, ಕೆಲ ದಿನಗಳ ಹಿಂದೆ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
“ಸಂಘದ ಸದಸ್ಯರಿಗೆ ತಿಳಿಸಿ, ಯಾವುದಾದರೂ ನಿಧಿ ಸ್ಥಾಪಿಸಿ, ಅದನ್ನು ಏಮ್ಸ್‌ಗೆ ದೇಣಿಗೆಯಾಗಿ ನೀಡಿ. ಇದಕ್ಕಾಗಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ. ಇದು ನಮ್ಮ ಅಪೇಕ್ಷೆಯಷ್ಟೇ” ಎಂದು ನ್ಯಾಯಾಲಯ ಹೇಳಿತು. ಇದೇ ವೇಳೆ ಅಪೇಕ್ಷೆ ಈಡೇರಿಸುವುದಾಗಿ ಡಿಎಚ್‌ಸಿಬಿಎ ಅಧ್ಯಕ್ಷ ಎನ್ ಹರಿಹರನ್ ಭರವಸೆ ನೀಡಿದರು. ಆಶ್ರಯ ಕೇಂದ್ರ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಹಿರಿಯ ವಕೀಲ ರಾಜೀವ್ ನಾಯರ್, ಎಎಸ್‌ಜಿ ಚೇತನ್ ಶರ್ಮಾ ಮತ್ತು ಡಿಎಚ್‌ಸಿಬಿಎ ಅಧ್ಯಕ್ಷ ಎನ್ ಹರಿಹರನ್ ಘೋಷಿಸಿದರು. ಅರುಣ್ ಜೇಟ್ಲಿ ಫೌಂಡೇಶನ್ ಕೂಡ ಏಮ್ಸ್‌ಗೆ ದೇಣಿಗೆ ನೀಡುವುದಾಗಿ ಹೇಳಿದೆ.
80 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲು ಭೂಮಿ, ಮೂರು ಆಶ್ರಯ ಕೇಂದ್ರಗಳಲ್ಲಿನ 949 ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ, ರಾತ್ರಿ ಓಡಾಟಕ್ಕಾಗಿ ಬಸ್ ಸೇವೆ, 3,000 ಹಾಸಿಗೆಗಳ ‘ವಿಶ್ರಾಂತಿ ಸದನ್’ ನಿರ್ಮಾಣ ಪ್ರಸ್ತಾವನೆಯನ್ನು ಏಮ್ಸ್ ಪರ ವಕೀಲರ ಸತ್ಯ ರಂಜನ್ ಸ್ವೈನ್ ತಿಳಿಸಿದರು. ಈ ಪ್ರಯತ್ನಗಳನ್ನು ಶ್ಲಾಘಿಸಿದ ನ್ಯಾಯಾಲಯ ದೆಹಲಿಯ ಎಲ್ಲಾ ಸಂಬಂಧಿತ ಸಂಸ್ಥೆಗಳು ಏಮ್ಸ್‌ಗೆ ಸಂಪೂರ್ಣ ಸಹಕಾರ ನೀಡಬೇಕೆಂದು ನಿರ್ದೇಶಿಸಿತು. ಕಳೆದ ಕೆಲವು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬ ತೃಪ್ತಿಯನ್ನು ವ್ಯಕ್ತಪಡಿಸಿದ ನ್ಯಾಯಪೀಠ, ಆದರೂ ಅಧಿಕಾರಿಗಳು ನಿರಂತರ ಎಚ್ಚರಿಕೆಯಿಂದ ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿತು. ಪ್ರಕರಣದ ಕುರಿತು 24ರಂದು ಎಲ್ಲ ಹಿತಾಸಕ್ತಿದಾರರನ್ನು ಒಳಗೊಂಡ ದಕ್ಷಿಣ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸಭೆ ನಡೆಸಿ ಜನವರಿ 27ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಲಾಯಿತು.