ನಾಯಿಗಳು ಭೀತಿಗೊಂಡವರ ಮೇಲೆ ಎರಗುತ್ತವೆ: ಸುಪ್ರೀಂ ಕೋರ್ಟ್

ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳು ಮತ್ತಿತರ ಪ್ರಾಣಿಗಳ ನಿಯಂತ್ರಣ ವಿಚಾರವಾಗಿ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಾಳೆಯೂ (ಶುಕ್ರವಾರ) ಮುಂದುವರೆಯಲಿದೆ.
Supreme Court, Stray Dog
Supreme Court, Stray Dog
Published on

ತಮ್ಮನ್ನು ಕಂಡು ಭಯಪಡುವವರನ್ನು ವಾಸನೆಯ ಮೂಲಕ ನಾಯಿಗಳು ಗುರುತಿಸಿ ಭೀತಿ ಇರುವುದು ಅರಿತಾಗ ದಾಳಿ ಮಾಡುತ್ತವೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ [ಸಿಟಿ ಹೌಂಡೆಡ್ ಬೈ ಸ್ಟ್ರೇಸ್, ಕಿಡ್ಸ್ ಪ್ರೇ ಪ್ರೈಸ್ ವರದಿ ಆಧರಿಸಿದ ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ] .

ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಡಿತ ಘಟನೆಗಳ ಸಂಬಂಧವಾಗಿ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ "ತನಗೆ ಹೆದರುವ ಮನುಷ್ಯನ ವಾಸನೆಯನ್ನು ನಾಯಿ ಸದಾ ಗ್ರಹಿಸಬಲ್ಲದು. ಹಾಗೆ ಗ್ರಹಿಸಿದಾಗ ಅದು ದಾಳಿ ಮಾಡುತ್ತದೆ. ವೈಯಕ್ತಿಕ ಅನುಭವದಿಂದ ಇದನ್ನು ಹೇಳಲಾಗುತ್ತಿದೆ" ಎಂದು ವಿವರಿಸಿತು.

Also Read
ಬೀದಿ ನಾಯಿ ಹಾವಳಿ: ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಸುಪ್ರೀಂ ತರಾಟೆ

ನ್ಯಾಯಾಲಯದ ಕೋಣೆಯೊಳಗೆ ಹಾಜರಿದ್ದ ನಾಯಿ ಪ್ರೇಮಿಯೊಬ್ಬರು ಅಸಮ್ಮತಿ ಸೂಚಿಸಿ ತಲೆಯಾಡಿಸಿದಾಗ, ನ್ಯಾಯಾಲಯ “ಮೇಡಂ ತಲೆಯಾಡಿಸದಿರಿ. ನೀವು ಭೀತರಾಗಿರುವುದು ಅವುಗಳಿಗೆ ತಿಳಿದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ನೀವು ಸಾಕಿರುವ ನಾಯಿಯೂ ಹಾಗೆ ಮಾಡಬಲ್ಲದು” ಎಂದಿತು.

ನೀವು ಭೀತರಾಗಿರುವುದು ಅವುಗಳಿಗೆ ತಿಳಿದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ನೀವು ಸಾಕಿರುವ ನಾಯಿಯೂ ಹಾಗೆ ಮಾಡಬಲ್ಲದು.
ಸುಪ್ರೀಂ ಕೋರ್ಟ್‌

ಹಿರಿಯ ವಕೀಲ ಸಿ ಯು ಸಿಂಗ್‌ ವಾದ ಮಂಡಿಸಿ ನಾಯಿಗಳನ್ನು ಏಕಾಏಕಿ ತೆರವುಗೊಳಿಸಿದರೆ, ಇಲಿಗಳ ಸಂಖ್ಯೆ ಏರಿ ಅನಿರೀಕ್ಷಿತ ಪರಿಣಾಮ ಉಂಟಾಗುತ್ತದೆ. ಕಿಕ್ಕಿರಿದ ಆಶ್ರಯ ಕೇಂದ್ರಗಳಲ್ಲಿ ನಾಯಿಗಳನ್ನು ಇರಿಸುವುದು ಬೇರೆ ರೋಗಗಳು ಹರಡುವುದಕ್ಕೆ ಕಾರಣವಾಗಬಹದು. ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂದರು.

ಇದೇ ವೇಳೆ ಹಿರಿಯ ನ್ಯಾಯವಾದಿ ಕೃಷ್ಣನ್‌ ವೇಣುಗೋಪಾಲ್‌ ಅವರು ಪ್ರಾಣಿಗಳ ಜನನ ನಿಯಂತ್ರಣ  ನಿಯಮಾವಳಿ ಅಡಿಯಲ್ಲಿ ಕೇವಲ 66 ಕೇಂದ್ರಗಳಿಗೆ ಮಾನ್ಯತೆ ನೀಡಲಾಗಿದೆ. ಈ ಸಂಖ್ಯೆಯನ್ನು ಸಾಕಷ್ಟು ಹೆಚ್ಚಿಸಬೇಕಿದೆ. ರಾಜ್ಯ ಸರ್ಕಾರಗಳು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು  ಅರ್ಹತೆ ಇಲ್ಲದ ವ್ಯಕ್ತಿಗಳಿಗೆ ಅಧಿಕಾರ ನೀಡುತ್ತಿವೆ ಎಂದು ಗಮನ ಸೆಳೆದರು.

ಆಶ್ರಯ ಕೇಂದ್ರಗಳಿಲ್ಲದ ವೇಳೆ ನಾಯಿಗಳನ್ನು ಎಲ್ಲಿ ಇರಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ ಎಂದು ಮತ್ತೊಬ್ಬ ಹಿರಿಯ ವಕೀಲ ಧ್ರುವ ಮೆಹ್ತಾ ಆಕ್ಷೇಪಿಸಿದರು. ನಾಯಿಗಳ ಸಂಖ್ಯೆ ಬಗ್ಗೆ ಸಮಗ್ರ ಮಾಹಿತಿ ಇಲ್ಲದೆ ಅವುಗಳನ್ನು ಹಿಡಿಯಲಾಗದು ಎಂದು ತಿಳಿಸಿದರು.

ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು ನಾಯಿಗಳನ್ನು ತೆರವುಗೊಳಿಸುವುದು, ಸಂತಾನಹರಣಚಿಕಿತ್ಸೆ ಹಾಗೂ ಲಸಿಕೆಪ್ರಯೋಗ ಕೊನೆಯ ಹಂತವಾಗಿರಬೇಕು. ಶ್ವಾನಗಣತಿ, ಆಶ್ರಯ ಕೇಂದ್ರಗಳ ಲಭ್ಯತೆಯಂತಹ ಅಂಶಗಳಿಗೆ ಆದ್ಯತೆ ನೀಡಬೇಕು. ಬೀದಿ ನಾಯಿ ಕಲ್ಯಾಣಕ್ಕಾಗಿ 2 ಲಕ್ಷ ರೂಪಾಯಿ ಠೇವಣಿ ಇರಿಸಿ ಪ್ರಕರಣದಲ್ಲಿ ಹಾಜರಾಗಬೇಕು ಎಂದು ಶ್ವಾನಪ್ರಿಯರು, ಎನ್‌ಜಿಒಗಳಿಗೆ ತಾನು ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ಹಿಂಪಡೆಯಬೇಕು. ಇಂತಹ ನಿಯಮ ವಿಧಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ವಾಣಿಜ್ಯಿಕ ಅಡ್ಡಿ ಎಂಬ ಭಾವನೆ ಮೂಡುತ್ತದೆ ಎಂದರು.

 ಮತ್ತೊಬ್ಬ ಹಿರಿಯ ವಕೀಲ ನಕುಲ್‌ ದಿವಾನ್‌ ಅವರು ವಾದ ಮಂಡಿಸಿ ನಾಯಿಗಳನ್ನು ಬೇರೆ ಪ್ರಾಣಿಗಳಿಗೆ ಹೋಲಿಸಬಾರದು ಅವು ಮನುಷ್ಯರ ಅತ್ಯುತ್ತಮ ಮಿತ್ರರು ಎಂದರು. ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿಗೆ ಸಂಬಂಧಿಸಿದಂತೆ ಮಾನವೀಯತೆಯುಳ್ಳ ಪರಿಹಾರ ಬೇಕಿದೆ. ನಾಯಿಗಳಿಗೆ ಹಾಕಿರುವ ಲಸಿಕೆ, ಸಂತಾನಹರಣ ಚಿಕಿತ್ಸೆ ಮಾಹಿತಿಗಾಗಿ ಅವುಗಳಿಗೆ ಮೈಕ್ರೊಚಿಪ್‌ ಅಳವಡಿಸಬೇಕು. ತಜ್ಞರ ಸಮಿತಿ ರಚಿಸಿ ಸಮಸ್ಯೆ ಪರಿಶೀಲಿಸಬೇಕು. ಬೀದಿ ನಾಯಗಿಳ ಸಂಖ್ಯೆ ವೃದ್ಧಿ ನಿಧಾನಗೊಳಿಸಲು ಕ್ರಮ ಅಗತ್ಯ ಎಂದು ಹೇಳಿದರು.

ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಅಂತರರಾಷ್ಟ್ರೀಯ ಸಂಸ್ಥೆ ʼಪೆಟಾʼ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಅವರು ತಜ್ಞ ಸಮಿತಿಯನ್ನು ರಚಿಸುವ ಅಗತ್ಯವಿದೆ. ನಾಯಿಗಳನ್ನು ನಿಯಂತ್ರಿಸಿದರೆ ಬೇರೆ ಸಮಸ್ಯೆಗಳು ತಲೆದೋರಬಹುದು ಎಂಬ ಮಾತಿಗೆ ವೈಜ್ಞಾನಿಕ ನೆಲೆಗಟ್ಟು ಇದೆ. ನಾಯಿಗಳನ್ನು ಗಿಜಿಗುಡುವ ಆಶ್ರಯ ಕೇಂದ್ರಗಳಲ್ಲಿಡುವುದು ಕ್ರೌರ್ಯ ಎಂದರು.

ಹೈಕೋರ್ಟ್‌ಗಳು ಇಂತಹ ಪ್ರಕರಣ ನಿರ್ವಹಿಸುವುದು ಸೂಕ್ತ ಎಂದು ಹಿರಿಯ ವಕೀಲ ವಿನಯ್‌ ನವರೆ ಅಭಿಪ್ರಾಯಪಟ್ಟರು. ಅದಕ್ಕಾಗಿ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.

ನಿಯಮಗಳು ಇದ್ದಾಗ, ಶಾಸನಾತ್ಮಕ ಶೂನ್ಯತೆಯಿಲ್ಲದ ಸಂದರ್ಭದಲ್ಲಿ ನ್ಯಾಯಾಲಯ ಅವುಗಳನ್ನು ಮೀರಬಾರದು ಎಂದು ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ಮನವಿ ಮಾಡಿದರು. ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳು ಪ್ರಾಣಿಗಳ ಜನನ ನಿಯಂತ್ರಣ  ನಿಯಮಾವಳಿಗೆ ಅತೀತವಾಗಿವೆ ಎಂದರು.

Also Read
ಶಾಲಾ ಕಾಲೇಜು, ಹೆದ್ದಾರಿಗಳಲ್ಲಿ ಬೀದಿ ನಾಯಿ, ಬೀಡಾಡಿ ದನಗಳ ಹಾವಳಿ ತಡೆಯಲು ಸುಪ್ರೀಂ ಕೋರ್ಟ್ ನಿರ್ದೇಶನ

ಪ್ರಾಣಿ ದಯಾ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಕರುಣಾ ನಂದಿ ಅವರು ಐಐಟಿ ದೆಹಲಿಯಲ್ಲಿ ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಅಲ್ಲಿ ನಾಯಿಗಳು ಕಚ್ಚಿದ ಉದಾಹರಣೆ ಇಲ್ಲ. ಶಾಶ್ವತ ಬಂಧನದ ಅವಶ್ಯಕತೆಯೂ ಇಲ್ಲ. ಪ್ರಾಣಿಗಳ ಜನನ ನಿಯಂತ್ರಣ  ನಿಯಮಾವಳಿಯನ್ನು ತಜ್ಞರ ಸಲಹೆ ಮೇರೆಗೆ ರೂಪಿಸಲಾಗಿದೆ. ರೇಬಿಸ್‌ಗೆ ತುತ್ತಾದ ನಾಯಿಗಳನ್ನು ಸಾಗಿಸಲು ಐಸೋಲೇಷನ್‌ ವಾಹನ ಅಗತ್ಯ. ನಾಯಿಗಳ ಶವ ಸುಡುವ ಯಂತ್ರಗಳನ್ನು ಸ್ಥಾಪಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ವಿಜಯ್‌ ಗೋಯೆಲ್‌ ಅವರ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಸುಮೀತ್ ಪುಷ್ಕರಣ ಅವರು ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿರುವುದನ್ನು ಬೆಂಬಲಿಸಿದ್ದು ಆದೇಶವನ್ನು ಸಾಂಸ್ಥಿಕ ಪ್ರದೇಶಗಳಿಂದ ವಸತಿ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದರು. ನಾಯಿಗಳಿಗೆ ಕೌನ್ಸೆಲಿಂಗ್ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ನಾಯಿ ಮಾಲೀಕರಿಗೆ ಕೌನ್ಸೆಲಿಂಗ್ ಮಾಡಬಹುದು. ಎಂದ ಅವರು ನಾಯಿ ಯಾರನ್ನಾದರೂ ಕಚ್ಚಿದ ನಂತರ ಅದನ್ನು ಹೊರಗೆ ಬಿಡಬಾರದು ಎಂದು ಸಲಹೆ ನೀಡಿದರು.

ಸಾಕುಪ್ರಾಣಿ ಮತ್ತು ಬೀದಿ ನಾಯಿಯ ನಡುವಿನ ವ್ಯತ್ಯಾಸ ಇದೆ. ಬೀದಿ ನಾಯಿಗಳ ಬಗ್ಗೆ ಸರ್ಕಾರಕ್ಕೆ ನಿರ್ದಿಷ್ಟ ಹೊಣೆಗಾರಿಕೆಯಷ್ಟೇ ಇದ್ದು ಸಾರ್ವಜನಿಕ ಮಾರ್ಗವನ್ನು ಸುರಕ್ಷಿತವಾಗಿಡುವುದು ಅದರ ಕರ್ತವ್ಯ ಎಂದು ತಿಳಿಸಿದರು.

Kannada Bar & Bench
kannada.barandbench.com