ದೆಹಲಿಯಲ್ಲಿ ಮುಂಬರಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿವಿಪ್ಯಾಟ್ ಒಳಗೊಂಡ ಇವಿಎಂ ಯಂತ್ರಗಳನ್ನು ಮಾತ್ರ ಮತದಾನಕ್ಕೆ ಬಳಸಲು ನಿರ್ದೇಶಿಸಬೇಕು ಎಂದು ಕೋರಿದ್ದ ಆಮ್ ಆದ್ಮಿ ಪಕ್ಷದ (ಆಪ್) ಮನವಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ರಾಜ್ಯ ಚುನಾವಣಾ ಆಯೋಗಗಳಿಗೆ ದೆಹಲಿ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಆಪ್ ಶಾಸಕ ಸೌರಭ್ ಭಾರದ್ವಾಜ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಳ್ಳಿ ಅವರ ನೇತೃತ್ವದ ಏಕಸದಸ್ಯ ಪೀಠವು ಈ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಆದೇಶಿಸಿದೆ.
ತಾವು ಚಲಾಯಿಸಿರುವ ಅಭ್ಯರ್ಥಿಗೇ ತಮ್ಮ ಮತ ಚಲಾವಣೆಯಾಗಿದೆ ಎಂಬುದನ್ನು ತಿಳಿಯುವ ದೃಷ್ಟಿಯಿಂದ ವಿವಿಪ್ಯಾಟ್ ಒಳಗೊಂಡ ಇವಿಎಂಗಳನ್ನು ಮಾತ್ರ ಮತದಾನಕ್ಕೆ ಬಳಸಬೇಕು. ಇಲ್ಲವಾದಲ್ಲಿ ಯಾರಿಗೆ ಮತ ಹೋಗುತ್ತದೆ ಎಂದು ತಿಳಿಯುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆಪ್ ಪರ ವಕೀಲ ರಾಹುಲ್ ಮೆಹ್ರಾ ಅವರು “ಚುನಾವಣೆಗೆ ಕೆಲವೇ ಕೆಲವು ವಾರ ಬಾಕಿ ಇವೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಚುನಾವಣಾ ಆಯೋಗವು ಇನ್ನೂ ಸೂಕ್ತವಾದ ಮೂಲ ಸೌಕರ್ಯ ಅಭಿವೃದ್ಧಿಪಡಿಸಿಲ್ಲ” ಎಂದರು.
ಭಾರತೀಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು “ಸರ್ಕಾರಕ್ಕೆ ಈಗಾಗಲೇ ಅರವತ್ತು ಸಾವಿರ ಎಂ-2 ಇವಿಎಂ ಯಂತ್ರಗಳನ್ನು ನೀಡಲಾಗಿದೆ. ಅರ್ಜಿ ನಿರ್ವಹಣೆಗೆ ಅರ್ಹವಾಗಿಲ್ಲ” ಎಂದರು. ವಿವಿಪ್ಯಾಟ್‌ಗಳ ಜೊತೆ ಕಾರ್ಯನಿರ್ವಹಿಸಲು ಎಂ-2 ಇವಿಎಂಗಳು ಅರ್ಹವಾಗಿಯೇ ಎಂಬುದರ ಕುರಿತು ತಿಳಿಸುವಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳಿಗೆ ಪೀಠ ಸೂಚಿಸಿತು.