ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಭಾದು ಶೇಖ್ ಕೊಲೆಗೆ ಪ್ರತೀಕಾರವಾಗಿ ಎಂಟು ಮಂದಿಯನ್ನು ಕೊಲೆ ಮಾಡಲ್ಪಟ್ಟಿರುವ ಪ್ರಕರಣದ ತನಿಖೆಯನ್ನು ಶುಕ್ರವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕಲ್ಕತ್ತಾ ಹೈಕೋರ್ಟ್ ವರ್ಗಾಯಿಸಿದೆ.
ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವಲ್ಲದೇ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾ. ರಾಜರ್ಷಿ ಭಾರದ್ವಾಜ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.
“ನ್ಯಾಯದಾನದ ಹಿತಾಸಕ್ತಿಯಿಂದ, ವಿಶ್ವಾಸವನ್ನು ಮೂಡಿಸುವ ಸಲುವಾಗಿ ಹಾಗೂ ಸತ್ಯವನ್ನು ಬಯಲಿಗೆಳೆಯುವ ನ್ಯಾಯಸಮ್ಮತ ತನಿಖೆಗಾಗಿ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಗೆ ಎಲ್ಲಾ ಸಹಕಾರವನ್ನು ರಾಜ್ಯದ ಸಂಸ್ಥೆಗಳು ನೀಡಬೇಕು" ಎಂದು ಪೀಠ ನಿರ್ದೇಶಿಸಿದೆ.
ಸಿಬಿಐಗೆ ಪ್ರಕರಣ ವರ್ಗಾಯಿಸಿದ ಮೇಲೆ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ತನಿಖೆ ನಡೆಸಬಾರದು ಎಂದು ನ್ಯಾಯಾಲಯ ಹೇಳಿದೆ. ತಕ್ಷಣ ಪ್ರಕರಣದ ವಿಚಾರಣೆಯನ್ನು ಸಿಬಿಐ ಆರಂಭಿಸಬೇಕು. ಏಪ್ರಿಲ್ 7ರಂದು ಪ್ರಗತಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಆದೇಶಕ್ಕೆ ತಡೆ ನೀಡಬೇಕು. ಈ ಕುರಿತು ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಪೀಠವು ತಿರಸ್ಕರಿಸಿತು.
ಬೊರೊಶಲ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ, ಟಿಎಂಸಿ ನಾಯಕ ಶೇಖ್ ಅವರನ್ನು ಅನಾಮಿಕರು ಮಾರ್ಚ್ 21ರ ರಾತ್ರಿ 8:30ರ ಸುಮಾರಿಗೆ ಕೊಲೆಗೈದಿದ್ದರು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, 10 ರಿಂದ 12 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು.
ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು. ಎಸ್‌ಐಟಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದೆ. ಅದು ಆಡಳಿತ ಪಕ್ಷದ ಗುಲಾಮಗಿರಿಗೆ ಮುಂದಾಗಲಿದೆ ಎಂದು ಆಕ್ಷೇಪಿಸಿ ಮನವಿಗಳನ್ನು ಸಲ್ಲಿಸಲಾಗಿತ್ತು.