Delhi air pollution, Supreme Court 
ಸುದ್ದಿಗಳು

ತಾರಕಕ್ಕೇರಿದ ದೆಹಲಿ ಮಾಲಿನ್ಯ: ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗದಂತೆ ಆದೇಶಿಸಿದ ಸುಪ್ರೀಂ ಕೋರ್ಟ್

ಜಿಆರ್‌ಎಪಿ III ಮತ್ತು IVನೇ ನಿಯಮಾವಳಿ ಜಾರಿಗೆ ತರುವಲ್ಲಿ ಉಂಟಾಗಿರುವ ವಿಳಂಬವನ್ನು ಟೀಕಿಸಿದ ಪೀಠ ಇದರಿಂದಾಗಿ ಮಾಲಿನ್ಯ ತಡೆ ಕ್ರಮ ಕಡ್ಡಾಯಗೊಳಿಸುವ 2018ರ ಆದೇಶದ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದೆ.

Bar & Bench

ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ ಪರಾಕಾಷ್ಠೆ ತಲುಪಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಬರುವ ಎಲ್ಲಾ ರಾಜ್ಯಗಳಲ್ಲಿ (ಎನ್‌ಸಿಆರ್‌) 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗದಂತೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ನೀಡಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].

10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳನ್ನು ಭೌತಿಕವಾಗಿ ತರಗತಿಗಳಿಗೆ ಹಾಜರಾಗುವಂತೆ ಮಾಡಲಾಗುತ್ತಿದೆ ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹರಿಯಾಣ, ದೆಹಲಿ, ರಾಜಸ್ಥಾನ ಉತ್ತರ ಪ್ರದೇಶದ ಕೆಲಭಾಗಗಳನ್ನು ಒಳಗೊಂಡ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 12 ನೇ ತರಗತಿಯವರೆಗಿನ ಎಲ್ಲಾ ಭೌತಿಕ ತರಗತಿಗಳನ್ನು ನಿಲ್ಲಿಸಲು ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೀವ್ರವಾಗಿ ಕುಸಿದಿರುವುದರಿಂದ ವಾಯುಮಾಲಿನ್ಯ ಸೂಚ್ಯಂಕ ಆಧರಿತ ಪ್ರತಿಕ್ರಿಯಾತ್ಮಕ ಕ್ರಿಯಾ ಯೋಜನೆ - ಜಿಆರ್‌ಎಪಿ IVರ ಅಡಿಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವಂತೆ ಅದು ಸೂಚಿಸಿತು.

ಜಿಆರ್‌ಎಪಿ III ಮತ್ತು IVನೇ ನಿಯಮಾವಳಿ ಜಾರಿಗೆ ತರುವಲ್ಲಿ ಉಂಟಾಗಿರುವ ವಿಳಂಬವನ್ನು ಟೀಕಿಸಿದ ಪೀಠ ಇದರಿಂದಾಗಿ ಮಾಲಿನ್ಯ ತಡೆ ಕ್ರಮ ಕಡ್ಡಾಯಗೊಳಿಸುವ 2018ರ ಆದೇಶದ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿತು. 

ಜಿಆರ್‌ಎಪಿ ಹಂತ IV ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಷ್ಟ್ರೀಯ ರಾಜಧಾನಿ ಪ್ರದೇಶದ ಎಲ್ಲಾ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹಂತ IV ರ ಅಡಿಯಲ್ಲಿ ಅಗತ್ಯವಿರುವ ಮೇಲ್ವಿಚಾರಣಾ ಕ್ರಮಗಳಿಗಾಗಿ ಮೇಲ್ವಿಚಾರಣಾ ತಂಡಗಳನ್ನು ರಚಿಸುವಂತೆಯೂ ಅದು ಆದೇಶಿಸಿದೆ.

ಮುಂದಿನ ಆದೇಶದವರೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸುಧಾರಣೆಗೊಂಡು ಮಾಲಿನ್ಯದ ಮಟ್ಟ 450 ಎಕ್ಯೂಐಗಿಂತ ಕಡಿಮೆಯಾದಾಗಲೂ ಜಿಆರ್‌ಎಪಿ IVನೇ ಹಂತ ಮುಂದುವರೆಯಬೇಕು ಎಂದು ಅದು ಸ್ಪಷ್ಟಪಡಿಸಿದೆ. ನವೆಂಬರ್ 21 ರ ಗುರುವಾರದೊಳಗೆ ಆದೇಶ ಪಾಲನೆಗೆ ಸಂಬಂಧಿಸಿದ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ನವೆಂಬರ್ 22 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಇಂದು ಬೆಳಗಿನ ವಿಚಾರಣೆ ವೇಳೆ "ಎಕ್ಯೂಐ 300 ಕ್ಕಿಂತ ಕಡಿಮೆಯಾದರೂ ನಮ್ಮ ಅನುಮತಿಯಿಲ್ಲದೆ ನೀವು 4ರ ಹಂತಕ್ಕಿಂತ ಕೆಳಗೆ ಇಳಿಯುವಂತಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಅದು ನಾವು ನೀಡಬೇಕೆಂದಿರುವ ಆದೇಶವಾಗಿದೆ" ಎಂದು ಪೀಠ ಹೇಳಿತ್ತು.