Delhi riots, Umar Khalid and Sharjeel Imam 
ಸುದ್ದಿಗಳು

ದೆಹಲಿ ಗಲಭೆ ಸಂಚು: ಆರೋಪ ನಿಗದಿ ಸಂಬಂಧ ಸೆ. 11ರಿಂದ ದಿನವಹಿ ವಿಚಾರಣೆ ನಡೆಸಲಿದೆ ದೆಹಲಿ ನ್ಯಾಯಾಲಯ

ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಸಫೂರ ಜರ್ಗರ್, ನತಾಶಾ ನರ್ವಾಲ್ ಸೇರಿದಂತೆ 16 ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

Bar & Bench

ಈಶಾನ್ಯ ದೆಹಲಿ ಗಲಭೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಿಂದ ನಿತ್ಯ ವಿಚಾರಣೆ ನಡೆಸುವುದಾಗಿ ಮತ್ತು ಆರೋಪ ನಿಗದಿ ಸಂಬಂಧದ ವಾದ ಆಲಿಸುವುದಾಗಿ ದೆಹಲಿಯ ಕಡ್‌ಕಡ್‌ಡೂಮ ನ್ಯಾಯಾಲಯ ಶನಿವಾರ ಹೇಳಿದೆ.

ಮುಂದಿನ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೆಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಆದೇಶಿಸಿದ್ದಾರೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಅಮಿತ್ ಪ್ರಸಾದ್ ಅವರು ಸೆಪ್ಟೆಂಬರ್ 11ರಂದು ತಮ್ಮ ವಾದ  ಆರಂಭಿಸಲಿದ್ದು ಅದಾದ ಬಳಿಕ ಆರೋಪಿಗಳ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 207ರ ಅಡಿ  ಆರೋಪಪಟ್ಟಿಯಲ್ಲಿರುವ ಎಲ್ಲಾ ಆರೋಪಿಗಳ ಅನುಪಾಲನೆ ಮಾಡುವುದು ಪೂರ್ಣಗೊಂಡಿದೆ. ಹೀಗಾಗಿ 11.09.2023ರಂದು ನಿತ್ಯ ವಿಚಾರಣೆಗಾಗಿ ಪ್ರಕರಣ ಪಟ್ಟಿ ಮಾಡುವಂತೆ ನ್ಯಾಯಾಲಯ ಹೇಳಿದೆ.

"ಎಲ್ಲಾ ಆರೋಪಿಗಳು ಮುಂದಿನ ದಿನಾಂಕದಂದು ಖುದ್ದು ಹಾಜರಿರಬೇಕು. ಸಂಬಂಧಪಟ್ಟ ತನಿಖಾಧಿಕಾರಿ ಮುಂದಿನ ವಿಚಾರಣೆಯ ದಿನ ಉಪಸ್ಥಿತರಿರಬೇಕು. ಆದೇಶ ಪಾಲನೆಗಾಗಿ ಜೈಲಿನ ಸೂಪರಿಂಟೆಂಡೆಂಟ್‌ ಅವರಿಗೆ ಆದೇಶದ ಪ್ರತಿ ಕಳುಹಿಸಿ” ಎಂದು ನ್ಯಾಯಾಲಯ ಸೂಚಿಸಿದೆ.

ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಖಾಲಿದ್ ಸೈಫಿ, ಇಶ್ರತ್‌ ಜಹಾನ್, ಮೀರನ್ ಹೈದರ್, ತಾಹಿರ್ ಹುಸೇನ್, ಗುಲ್ಫಿಶಾ ಫಾತಿಮಾ, ಶಿಫಾ ಉರ್ ರೆಹಮಾನ್, ಆಸಿಫ್ ಇಕ್ಬಾಲ್ ತನ್ಹಾ, ಸಫೂರಾ ಜರ್ಗರ್ ಹಾಗೂ ನತಾಶಾ ನರ್ವಾಲ್ ಸೇರಿದಂತೆ ಒಟ್ಟು 20 ಮಂದಿಯನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ.